ರಾಮನಗರ: ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುವಂತಹ ಇಂಧನ ಇಲಾಖೆಯ ಅವೈಜ್ಞಾನಿಕ ತೀರ್ಮಾನಗಳಿಂದ ರೈತರು ಹಾಗೂ ವಿದ್ಯುತ್ ಗ್ರಾಹಕರ ಮೇಲೆ ತೀವ್ರ ತರವಾದ ಹೊರೆಯಾಗುತ್ತಿದೆ. ಇಂತಹ ನಿರ್ಧಾರಗಳನ್ನು ಹಿಂಪಡೆಯಬೇಕು ಎಂದು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೆಂಕಟೇಶ್ ಒತ್ತಾಯಿಸಿದರು.
ಈಗಾಗಲೇ ಗುಣಮಟ್ಟದ ವಿದ್ಯುತ್ ಪೂರೈಸಲು ವಿಫಲವಾಗಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಸರ್ಕಾರ, ದುಬಾರಿ, ಅನಗತ್ಯ ಸ್ಮಾರ್ಟ್ ಮೀಟರ್ ಖರೀದಿಸಲು ಕಡ್ಡಾಯ ಮಾಡುವ ಯೋಜನೆಯೊಂದನ್ನು ರೂಪಿಸಿದೆ. ಈ ಬಗ್ಗೆ ವ್ಯಾಪಕವಾಗಿ ವಿರೋಧ ಮತ್ತು ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಅಥವಾ ಎಸ್ಕಾಂಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ವಿದ್ಯುತ್ ವಿತರಣೆಯನ್ನು ಪರಿಣಾಮಕಾರಿಯಾಗಿಸಲು ಆರ್‌ಡಿಡಿಎಸ್ ಯೋಜನೆಯನ್ನು ಜಾರಿಗೆ ತಂದು ರಾಜ್ಯ ಸರ್ಕಾರಗಳಿಗೆ ಹಣಕಾಸಿನ ನೆರವನ್ನೂ ಘೋಷಿಸಿತ್ತು. ಅನೇಕ ರಾಜ್ಯಗಳು ಇದರ ಉಪಯೋಗ ಪಡೆದುಕೊಂಡಿದ್ದರೆ, ಕರ್ನಾಟಕ ಮಾತ್ರ ಇನ್ನೂ ಈ ಯೋಜನೆಯ ನೆರವನ್ನು ಪಡೆದುಕೊಂಡಿಲ್ಲ ಎಂದರು.ಈಗ ರಾಜ್ಯ ಸರ್ಕಾರ ಎಸ್ಕಾಂಗಳ ಉದ್ಧಾರಕ್ಕಾಗಿ ಎಂದು ಬಿಂಬಿಸಿ ಪರಿಚಯಿಸಲು ಮುಂದಾಗಿರುವ ಸದರಿ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆ ರೂಪಿಸುವಾಗ ಮಾತ್ರ ಸಿಇಎ ಮತ್ತು ಕೆಇಆರ್‌ಸಿ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿದೆ. ಸರ್ಕಾರದ ಈ ಅವಸರದ ಹಿಂದಿರುವುದು ಮಾತ್ರ ಗ್ರಾಹಕರ ಜೇಬಿಗೆ ಕತ್ತರಿ ಹಾಕಿ, ಕೆಲ ಅಧಿಕಾರಿಗಳ ಮತ್ತು ಅಧಿಕಾರಸ್ಥರ ತಿಜೋರಿ ತುಂಬಿಸುವ ಹುನ್ನಾರವಾಗಿದೆ ಎಂದು ಟೀಕಿಸಿದರು.
ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆ ರೂಪಿಸುವಾಗ ಸರ್ಕಾರ ಕೆಲವು ಹಂತಗಳನ್ನು ಅನುಸರಿಸಬೇಕಿತ್ತು. ಈ ಹಂತಗಳನ್ನು ಪಾಲಿಸಿದಾಗಲಷ್ಟೇ ಸಾವಿರಾರು ಕೋಟಿ ವೆಚ್ಚದ ಈ ಯೋಜನೆಯ ಸಂಪೂರ್ಣ ಉಪಯೋಗ ಸಿಗುವುದು. ಆದರೆ, ಸರ್ಕಾರ ಮೊದಲ ಎರಡು ಹಂತಗಳನ್ನು ನಿರ್ಲಕ್ಷಿಸಿ ಹೊಸ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸುವ ಅವೈಜ್ಞಾನಿಕ, ಅಪ್ರಸ್ತುತ, ಅಪ್ರಯೋಜಕ ಕೆಲಸಕ್ಕೆ ಮುಂದಾಗಿದೆ ಎಂದರು.
ಬೆಸ್ಕಾಂ ಕಚೇರಿಯಿಂದ ಮುಂಬರುವ ಎಲ್ಲಾ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದು ಫೆ.15ರಂದು ಆದೇಶ ಹೊರಡಿಸಲಾಗಿತ್ತು. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ ನಡೆಸಲಾಗಿತ್ತು.
ಹೀಗಾಗಿ ಬೆಸ್ಕಾಂ ಕೇಂದ್ರ ಕಚೇರಿಯಿಂದ ಹೊರಡಿಸಿರುವ ಪತ್ರವನ್ನು ಹಿಂಪಡೆಯಬೇಕು. ದೇಶದ ಬೇರೆ ರಾಜ್ಯಗಳಲ್ಲೆಲ್ಲ ಉಚಿತ ಮಾಪಕಗಳನ್ನು ಕೊಟ್ಟಿದ್ದು ಹಾಗೂ ಹಳೆಯ ಸಂಪರ್ಕಗಳಿಗೆ ಮೊದಲು ಬದಲಾಯಿಸಿ ಗ್ರಾಹಕರಿಗೆ ಬೇಕಾದರೆ ಮಾತ್ರವೇ ಮಾಪಕಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ. ಗೋಪಾಲ್ ಮಾತನಾಡಿ, ರಾಜ್ಯ ಸರ್ಕಾರ ರೈತ ವಿರೋಧಿಯಾಗಿದೆ. ಬಿಡದಿ ಹೋಬಳಿಯಲ್ಲಿ ಟೌನ್ ಶಿಪ್ ನಿರ್ಮಾಣದ ಹೆಸರಿನಲ್ಲಿ ರೈತರ ಜಮೀನನ್ನು ಕಸಿದುಕೊಳ್ಳಲು ಮುಂದಾಗಿದೆ. ಮುಂದಿನ ದಿನಳಲ್ಲಿ ಬಿಡದಿ ಭಾಗದ ರೈತರು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಪಾದಯಾತ್ರೆ ಹಮ್ಮಿಕೊಳ್ಳಲಿದ್ದಾರೆ ಎಂದರು.
26ಕೆಆರ್ ಎಂಎನ್ 2.ಜೆಪಿಜಿ