ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಲಿ: ಪ್ರೊ.ಕೆ.ಚಿದಾನಂದಗೌಡ

KannadaprabhaNewsNetwork |  
Published : Jul 18, 2026, 12:30 AM IST
17ಕೆಎಂಎನ್ ಡಿ21,22 | Kannada Prabha

ಸಾರಾಂಶ

ಜಗತ್ತು ಇಂದು ಸಾಕಷ್ಟು ಮುಂದೆ ಹೋಗಿದೆ. ಇಂಜಿನಿಯರಿಂಗ್ ಪದವಿ ಪಡೆದು ರಾಷ್ಟ್ರ ಸೇವೆಗೆ ಮುಂದಾಗುವ ವೇಳೆ ಈ ದೇಶಕ್ಕೆ ನಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಆಲೋಚನೆ ಮಾಡಬೇಕು. ಎಲ್ಲರಲ್ಲೂ ಸೇವಾ ಮನೋಭಾವ ಮೂಡಬೇಕು. ಆಗ ಮಾತ್ರ ರಾಷ್ಟ್ರಕ್ಕೆ ಏನನ್ನಾದರೂ ಕೊಡುಗೆ ನೀಡಬಹುದು ಎಂದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿವೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯೊಂದಿಗೆ ಸಂಶೋಧನಾ ಮನೋಭಾವ ಬೆಳೆಸಿಕೊಂಡಲ್ಲಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬಹುದು ಎಂದು ಖ್ಯಾತ ಶಿಕ್ಷಣ ತಜ್ಞ ಹಾಗೂ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಬೆಂಗಳೂರಿನ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ 49ನೇ ಸರಣಿಯ ರಾಜ್ಯ ಮಟ್ಟದ ವಿದ್ಯಾರ್ಥಿ ಯೋಜನಾ ಪೋಸ್ಟರ್ ಪ್ರಸ್ತುತಿ ಹಾಗೂ ಪ್ರಾಜೆಕ್ಟ್ ಪ್ರದರ್ಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಗತ್ತು ಇಂದು ಸಾಕಷ್ಟು ಮುಂದೆ ಹೋಗಿದೆ. ಇಂಜಿನಿಯರಿಂಗ್ ಪದವಿ ಪಡೆದು ರಾಷ್ಟ್ರ ಸೇವೆಗೆ ಮುಂದಾಗುವ ವೇಳೆ ಈ ದೇಶಕ್ಕೆ ನಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಆಲೋಚನೆ ಮಾಡಬೇಕು. ಎಲ್ಲರಲ್ಲೂ ಸೇವಾ ಮನೋಭಾವ ಮೂಡಬೇಕು. ಆಗ ಮಾತ್ರ ರಾಷ್ಟ್ರಕ್ಕೆ ಏನನ್ನಾದರೂ ಕೊಡುಗೆ ನೀಡಬಹುದು ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದ ಸತ್ಕೀರ್ತಿನಾಥಸ್ವಾಮೀಜಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಾದರೂ ಸರಿ, ವಿದ್ಯಾರ್ಥಿಗಳು ಒಂದು ಗುರಿ ಇಟ್ಟುಕೊಂಡ ಮೇಲೆ ಹಿಂದೆ ತಿರುಗಿ ನೋಡಬಾರದು. ಮುಂದಿನ ಅಭ್ಯುದಯದ ದೃಷ್ಠಿಕೋನದೊಂದಿಗೆ ಶ್ರದ್ಧೆಯಿಂದ ಮುಂದೆ ನಡೆಯಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಬಹದು ಎಂದು ಹೇಳಿದರು.

ಉದ್ಯಮಶೀಲತೆ, ಕೃತಕ ಬುದ್ಧಿಮತೆ (ಎಐ) ಹಾಗೂ ಹೊಸ ಆವಿಷ್ಕಾರಗಳ ಮಹತ್ವ ಕುರಿತು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎನ್. ಶ್ರೀಧರ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿದ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಬಿ.ಗಿರೀಶ್, 2018ರಲ್ಲಿ ಸ್ಥಾಪನೆಯಾದ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ನ್ಯಾಕ್‌ನಿಂದ ಎ-ಪ್ಲಸ್ ಶ್ರೇಣಿಯ ಮಾನ್ಯತೆ ಪಡೆದಿರುವ ನಮ್ಮ ವಿಶ್ವವಿದ್ಯಾಲಯವು ಶೈಕ್ಷಣಿಕ ಶ್ರೇಷ್ಠತೆಯ ಪ್ರತೀಕವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ 173 ಪೋಸ್ಟರ್ ಪ್ರಸ್ತುತಿಗಳು ಹಾಗೂ 254 ವಿದ್ಯಾರ್ಥಿ ಪ್ರಾಜೆಕ್ಟ್‌ಗಳು ಪ್ರದರ್ಶನಗೊಳ್ಳಲಿವೆ. ವಿದ್ಯಾರ್ಥಿಗಳ ಸಂಶೋಧನಾ ಸಾಮರ್ಥ್ಯ, ನವೀನ ಆವಿಷ್ಕಾರಗಳು ಮತ್ತು ಸಮಾಜಮುಖಿ ತಂತ್ರಜ್ಞಾನ ಪರಿಹಾರಗಳಿಗೆ ವೇದಿಕೆ ಕಲ್ಪಿಸಲಾಗಿದೆ. ಇದರೊಂದಿಗೆ ತಜ್ಞರೊಂದಿಗೆ ಸಂವಾದ, ಜ್ಞಾನ ವಿನಿಮಯ ಹಾಗೂ ಕೈಗಾರಿಕಾ, ಶೈಕ್ಷಣಿಕ ಸಂಸ್ಥೆಗಳ ಸಹಯೋಗಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಎರಡು ದಿನಗಳ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳು, 207 ಅಧ್ಯಾಪಕರು, 40ಕ್ಕೂ ಹೆಚ್ಚು ತಜ್ಞ ಮೌಲ್ಯಮಾಪಕರು, 1300ಕ್ಕೂ ಹೆಚ್ಚು ಸಂದರ್ಶಕರು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಅಶೋಕ್ ಎಂ. ರೈಚೂರು, ಆದಿಚುಂಚನಗಿರಿ ವಿವಿ ರಿಜಿಸ್ಟ್ರಾರ್ ಸಿ.ಕೆ.ಸುಬ್ಬರಾಯ, ಬಿಜಿಎಸ್ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಹಾಗೂ ಪ್ರಾಂಶುಪಾಲೆ ಡಾ.ಬಿ.ಎನ್.ಶೋಭ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಎಸ್.ಎಚ್.ಮಂಜುನಾಥ್ ಸೇರಿದಂತೆ ವಿವಿಧ ವಿಭಾಗಗಳ ಡೀನ್‌ಗಳು, ಪ್ರಾಂಶುಪಾಲರು, ಕೆಎಸ್‌ಸಿಎಸ್‌ಟಿ ಅಧಿಕಾರಿಗಳು, ಕೈಗಾರಿಕಾ ತಜ್ಞರು, ಅಧ್ಯಾಪಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಸ್ತಿನಿಂದ ಅಭ್ಯಾಸ ಮಾಡಿದರೆ ಗುರಿ ಸಾಧಿಸಲು ಸಾಧ್ಯ
ರಿಯಲ್‌ ಎಸ್ಟೇಟ್‌ ದಂಧೆಗಾಗಿ ರೈತರ ಭೂಮಿ ವಶ: ಬಿಎಸ್‌ವೈ