ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಂಜಿನಿಯರ್ಸ್ ದಿನ-2026ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳವಾರ ಮಾತನಾಡಿದ ಅವರು, ತಾಂತ್ರಿಕತೆಯ ಹಿಂದಿನ ವಿಜ್ಞಾನ ಅರಿತು ಸಮಸ್ಯೆಗಳಿಗೆ ತಂತ್ರಜ್ಞಾನದ ಮುಖಾಂತರ ಉತ್ತರ ಕಂಡುಕೊಳ್ಳಬೇಕು, ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕತೆ ಮಾತ್ರವಲ್ಲ. ಅದರ ಹಿಂದಿನ ವಿಜ್ಞಾನವನ್ನು ಕೂಡ ತಿಳಿದುಕೊಳ್ಳಬೇಕು. ಅವಾಗ ಮಾತ್ರ ಪ್ರತಿಯೊಂದು ಸಮಸ್ಯೆಗೆ ಉತ್ತರವನ್ನು ತಂತ್ರಜ್ಞಾನ ರೂಪದಲ್ಲಿ ಹೊರ ತರಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯ ರಾಯಚೂರಿನ ಸಹಯೋಗದಲ್ಲಿ ಕೃಷಿಯಲ್ಲಿ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಕಾರ್ಯ ಚಟುವಟಿಕೆಗಳನ್ನು ಮಾಡಲು ಇಚ್ಛಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ.ಕೆ.ವಿ.ಪ್ರಕಾಶ್ ಅವರು ಮಾತನಾಡಿ, ಬೇರೆ ಬೇರೆ ವಿಭಾಗಗಳ ಎಂಜಿನಿಯರಿಂಗ್ ಗಳಿಗಿಂತ ಕೃಷಿ ತಾಂತ್ರಿಕ ವಿಭಾಗವು ಅತ್ಯಂತ ಉನ್ನತ ಸ್ಥಾನವನ್ನು ಪಡೆಯುತ್ತದೆ ಯಾಕೆಂದರೆ ಇದು ದೇಶಕ್ಕೆ ಅನ್ನ ನೀಡುವ ಘನತೆಯ ಜವಾಬ್ದಾರಿಯನ್ನು ಹೊತ್ತು ಕೊಂಡಿದೆ. ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಕೃಷಿ ಎಂಜಿನಿಯರಿಂಗ್ ತಂತ್ರಾಂಶಗಳನ್ನು ಮೈಗೂಡಿಸಿಕೊಂಡು ವಿದ್ಯಾಭ್ಯಾಸ ಮಾಡಿ ಉತ್ತಮ ಕೃಷಿ ಇಂಜಿನಿಯರ್ ಗಳಾಗಿ ಹೊರಬೇಕೆಂದು ತಿಳಿಸಿದರು.ಕೃಷಿ ವಿವಿಯ ಸರಕು ಖರೀದಿ ಅಧಿಕಾರಿ ಇಂ.ವಿದ್ಯಾಸಾಗರ್ ವಿ. ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಮಯದಲ್ಲಿಯೇ ಜೀವನಕ್ಕೆ ಬೇಕಾಗುವ ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು. ಹಾಗೂ ಕೃಷಿ ಎಂಜಿನಿಯರಿಂಗ್ ವಿಭಾಗದಲ್ಲಿ ನಿಮ್ಮ ವಿಶೇಷತೆಯನ್ನು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಅಭ್ಯಾಸ ಮಾಡಬೇಕೆಂದು ಹೇಳಿದರು.
ಇಂ.ಅಶ್ವಿನಿ ಐನಾಪುರ ಮಾತನಾಡಿ, ಮಹಿಳಾ ಅಭ್ಯರ್ಥಿಗಳಿಗೆ ಟ್ರ್ಯಾಕ್ಟರ್ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟದಾಯಕವಾಗಿರುತ್ತದೆ. ಆದರೆ ಕೆಲಸ ಮಾಡುವ ಛಲದ ಮನೋಭಾವನೆಯನ್ನು ಹೊಂದಿದರೆ ಸಮಾಜದಲ್ಲಿ ಇರುವ ಯಾವುದೇ ಕಟ್ಟಲೆಗಳು ನಮಗೆ ಅಡ್ಡಿಯಾಗುವುದಿಲ್ಲ ಎಂದರು.
ಆಹಾರ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಉದಯ್ ಕುಮಾರ್ ನಿಡೋನಿ ಅವರು ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಪಿ.ಎಫ್. ಮಠದ ವಂದಿಸಿದರು ಹಾಗೂ ವಿದ್ಯಾರ್ಥಿ ನಿರ್ಮಿತ ನಿರೂಪಿಸಿದರು.