ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 115 ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆಗೆ ಅಸ್ತು

KannadaprabhaNewsNetwork |  
Published : Jul 07, 2025, 11:48 PM IST
ಫೈಲ್ ಫೋಟೋ | Kannada Prabha

ಸಾರಾಂಶ

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ 123 ಶಾಲೆಗಳಲ್ಲಿ ಕನ್ನಡದೊಂದಿಗೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ. ಈಗ ಹೆಚ್ಚುವರಿಯಾಗಿ 115 ಶಾಲೆಗಳು ಸೇರ್ಪಡೆಯಾಗಿ, ಒಟ್ಟು 238 ಶಾಲೆಗಳು ದ್ವಿಭಾಷಾ ಶಾಲೆಗಳಾಗಿ ಪರಿವರ್ತನೆಯಾದಂತಾಗಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರವು ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 115 ಹೆಚ್ಚುವರಿ ಶಾಲೆಗಳನ್ನು ದ್ವಿಭಾಷಾ (ಕನ್ನಡ ಜತೆ ಇಂಗ್ಲಿಷ್‌ ಮಾಧ್ಯಮ) ಶಾಲೆಗಳಾಗಿ ಪರಿವರ್ತಿಸಲು ಆದೇಶ ಹೊರಡಿಸಿದೆ. ಇದರೊಂದಿಗೆ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗುವ ನಿರೀಕ್ಷೆ ಹೊಂದಲಾಗಿದೆ.ಪ್ರಸ್ತುತ ಜಿಲ್ಲೆಯ 123 ಶಾಲೆಗಳಲ್ಲಿ ಕನ್ನಡದೊಂದಿಗೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ. ಈಗ ಹೆಚ್ಚುವರಿಯಾಗಿ 115 ಶಾಲೆಗಳು ಸೇರ್ಪಡೆಯಾಗಿ, ಒಟ್ಟು 238 ಶಾಲೆಗಳು ದ್ವಿಭಾಷಾ ಶಾಲೆಗಳಾಗಿ ಪರಿವರ್ತನೆಯಾದಂತಾಗಿದೆ.2019- 20ನೇ ಸಾಲಿನಿಂದ ರಾಜ್ಯದ ಶಾಲೆಗಳಲ್ಲಿ ದ್ವಿಭಾಷಾ ಕಲಿಕಾ ಪದ್ಧತಿ ಆರಂಭವಾಗಿತ್ತು. ಆರಂಭಿಕ ವರ್ಷದಲ್ಲಿ ರಾಜ್ಯದ 1 ಸಾವಿರ ಶಾಲೆಗಳನ್ನು ಆಯ್ಕೆ ಮಾಡಿದ್ದರೆ, 2024-25ರಲ್ಲಿ 2 ಸಾವಿರ, ಈ ಶೈಕ್ಷಣಿಕ ವರ್ಷದಲ್ಲಿ 4,134 ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆಗೆ ಆದೇಶ ಮಾಡಲಾಗಿದೆ. ಆರಂಭದಲ್ಲಿ ದ.ಕ.ದ ಪ್ರತಿ ತಾಲೂಕಿನ ತಲಾ 15 ಶಾಲೆಗಳನ್ನು ಆಯ್ಕೆ ಮಾಡಲಾಗಿತ್ತು. ನಂತರ ಬೇಡಿಕೆಯ ಹಿನ್ನೆಲೆಯಲ್ಲಿ ಇನ್ನಷ್ಟು ಶಾಲೆಗಳನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.

ಮಕ್ಕಳ ಸಂಖ್ಯೆ ದ್ವಿಗುಣ!:

ಕಳೆದೊಂದು ದಶಕದಿಂದ ದ.ಕ. ಜಿಲ್ಲೆಯಲ್ಲಿ ವರ್ಷ ಕಳೆದಂತೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಅನೇಕ ಶಾಲೆಗಳು ಮುಚ್ಚುವ ಹಂತ ತಲುಪಿದ್ದವು. ದ್ವಿಭಾಷಾ ಕಲಿಕೆ ಆರಂಭಿಸಿದ ಬಳಿಕ ಈ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

‘ಈಗಾಗಲೇ ದ್ವಿಭಾಷಾ ತರಗತಿ ನಡೆಯುತ್ತಿರುವ 123 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಮೊದಲಿಗಿಂತ ಬಹುತೇಕ ದುಪ್ಪಟ್ಟಾಗಿದೆ. ಈ ವರ್ಷ ಹೆಚ್ಚುವರಿಯಾಗಿ 115 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಕಲಿಕೆಗೆ ಅವಕಾಶ ನೀಡಿದ್ದರಿಂದ ಹಾಗೂ ಜು.31ರವರೆಗೆ ದಾಖಲಾತಿ ಅವಧಿ ಇರುವುದರಿಂದ ಇನ್ನಷ್ಟು ಮಕ್ಕಳ ಸೇರ್ಪಡೆಯ ನಿರೀಕ್ಷೆಯಿದೆ’ ಎಂದು ದ.ಕ. ಡಿಡಿಪಿಐ ಗೋವಿಂದ ಮಡಿವಾಳ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ದ್ವಿಭಾಷಾ ಕಲಿಕೆಗೆ ಅನುಮತಿ ನೀಡಿರುವ ಶಾಲೆಗಳಿಗೆ ಸರ್ಕಾರದಿಂದ ಹೆಚ್ಚುವರಿ ಸೌಲಭ್ಯಗಳೇನೂ ಸಿಗಲ್ಲ. ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಶಾಲೆಗಳೇ ದ್ವಿಭಾಷಾ ಕಲಿಕೆಗೆ ಅಣಿಯಾಗಬೇಕು. ಶಿಕ್ಷಕರಿಗೆ ಈ ಕುರಿತು ಡಯಟ್‌ ವತಿಯಿಂದ ತರಬೇತಿ ನೀಡಲಾಗುತ್ತದೆ.

ಜಿಲ್ಲೆಯಲ್ಲಿ ಅಗತ್ಯವಿರುವ ಅತಿಥಿ ಶಿಕ್ಷಕರ ಎಲ್ಲ ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಪ್ರಾಥಮಿಕ ಶಾಲೆಗಳಿಗೆ 1022 ಅತಿಥಿ ಶಿಕ್ಷಕರ ನೇಮಕವಾಗಿದ್ದರೆ, ಪ್ರೌಢಶಾಲೆಗಳಿಗೆ 316 ಶಿಕ್ಷಕರ ನೇಮಕ ಮಾಡಲಾಗಿದೆ. ಅವರಿಗೆ ಜೂನ್‌ ತಿಂಗಳ ಗೌರವಧನ ಇದುವರೆಗೂ ಬಿಡುಗಡೆಯಾಗಿಲ್ಲ. ಶೀಘ್ರ ಬಿಡುಗಡೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ