ಸರ್ಕಾರಿ ಶಾಲೆಯಲ್ಲಿ ಪೋಷಕರಿಂದಲೇ ಆಂಗ್ಲ ಮಾಧ್ಯಮ ಶುರು

KannadaprabhaNewsNetwork |  
Published : Jul 07, 2025, 11:48 PM IST
7ಜೆ.ಎಲ್.ಆರ್.ಚಿತ್ರ 1: ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ನಲಿ ಕಲಿಯ ಜೊತೆಗೆ ಆಂಗ್ಲ ಮಾಧ್ಯಮ ಬೋಧನೆಗೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 3ನೇ ತರಗತಿ ಮಕ್ಕಳಿಗೆ ಪೋಷಕರೇ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಒತ್ತಾಯಿಸಿ, ಹಣ ಸಂಗ್ರಹ ಮಾಡಿ ಶಿಕ್ಷಕರನ್ನು ನೇಮಿಸುವ ಮೂಲಕ ಸರ್ಕಾರದ ನಲಿ ಕಲಿ ಜೊತೆಗೆ ಕಾನ್ವೆಂಟ್ ಶಿಕ್ಷಣ ಕೊಡಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

- ಕಟ್ಟಿಗೆಹಳ್ಳಿ ಶಾಲೆಯಲ್ಲಿ ಕಾನ್ವೆಂಟ್‌ ಶಿಕ್ಷಣ ಕೊಡಿಸಲು ಹಣ ಸಂಗ್ರಹ, ಶಿಕ್ಷಕರ ನೇಮಕ - - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 3ನೇ ತರಗತಿ ಮಕ್ಕಳಿಗೆ ಪೋಷಕರೇ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಒತ್ತಾಯಿಸಿ, ಹಣ ಸಂಗ್ರಹ ಮಾಡಿ ಶಿಕ್ಷಕರನ್ನು ನೇಮಿಸುವ ಮೂಲಕ ಸರ್ಕಾರದ ನಲಿ ಕಲಿ ಜೊತೆಗೆ ಕಾನ್ವೆಂಟ್ ಶಿಕ್ಷಣ ಕೊಡಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ಈ ಗ್ರಾಮದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ. ಇದಕ್ಕೂ ಮುನ್ನ ಅನೇಕ ಪೋಷಕರು ಸರ್ಕಾರಿ ಶಾಲೆ ಬಿಡಿಸಿ, ಜಗಳೂರು ಪಟ್ಟಣದ ವಿವಿಧ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ, ಸಾವಿರಾರು ರು. ಶಾಲಾ ಶುಲ್ಕ ಕಟ್ಟಿ ಸೇರಿಸಿದ್ದಾರೆ. ಆದರೆ, ಇದು ಸಾಧ್ಯವಾಗದ ಅನೇಕ ಪೋಷಕರು ಒಟ್ಟಾಗಿ ಸೇರಿ ಇಂಗ್ಲಿಷ್ ಬೋಧಿಸುವ ಶಿಕ್ಷಕಿಯನ್ನು ನೇಮಿಸಲು ಹಣ ಸಂಗ್ರಹಿಸಿ, ಪಠ್ಯಪುಸ್ತಕಗಳನ್ನು ತರಿಸಿ, ಬೋಧಿಸುವ ಕಾರ್ಯಕ್ಕೆ ಕಟ್ಟಿಗೆಹಳ್ಳಿಯಲ್ಲಿ ಸೋಮವಾರ ಚಾಲನೆ ನೀಡಿದ್ದಾರೆ.

ಈ ವೇಳೆ ಸಿಆರ್‌ಪಿ ರಾಜಶೇಖರ್ ಮಾತನಾಡಿ, ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಕ್ಕೆ ಸಂಬಂಧಿಸಿದಂತೆ ಶಾಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ತಿಂಗಳು ಅನುಷ್ಠಾನಾಧಿಕಾರಿಗಳು 189 ಶಾಲೆಗಳಿಗೆ ಭೇಟಿ ನೀಡಿ, ಕಲಿಕೆಯಲ್ಲಿ ಹಿಂದುಳಿದ ಮತ್ತು ಮುಂದುವರಿದ ಶಾಲೆಗಳ ಬಗ್ಗೆ ಅವಲೋಕಿಸುವ ಕಾರ್ಯ ಮಾಡಲು, ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಮುಂಚೂಣಿಗೆ ತರಲು ಯೋಜನೆ ಹಾಕಿಕೊಂಡು ಕಲಿಕೆಗೆ ಪೂಕರವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಶಾಲಾ ಅವಧಿ ಬೆಳಗ್ಗೆ 10 ರಿಂದ ಸಂಜೆ 4.30ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳ ಜೊತೆ ಬೆರೆಯುವ ಕೆಲಸ ಮಾಡಿ ಎಂದು ಆದೇಶ ಬಂದಿದೆ. ಅದರಂತೆ ನಿರೀಕ್ಷಿತ ಫಲಿತಾಂಶ ಗಳಿಸಲು, ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಲ್ಲೇಶಪ್ಪ, ಗೊಂದ್ಯಪ್ಪ, ತಿಪ್ಪೇಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಎನ್.ಎನ್. ಶಿವಕುಮಾರ್, ಎನ್.ಬಿ. ಮಂಜುನಾಥ್, ಪೋಷಕರು ಇದ್ದರು.

- - -

(ಬಾಕ್ಸ್‌)

ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ಅದರಲ್ಲೂ ಗುಣಮಟ್ಟದ ಶಿಕ್ಷಣ ಸಿಗುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಪೋಷಕರೇ ಮುಂದಾಗಿರುವುದು ಸಂತೋಷದ ವಿಷಯ. ಇದು ತಾಲೂಕಿನಲ್ಲೇ ಮೊದಲ ಪ್ರಯತ್ನವಾಗಿದೆ. ಖಾಸಗಿ ಶಾಲೆಗಳಿಗೆ ಮಕ್ಕಳು ಹೋಗದಂತೆ ತಡೆಯುವ ಪ್ರಯತ್ನ ಜೊತೆಗೆ ಸರ್ಕಾರಿ ಶಾಲೆಗಳ ಉಳಿವಿಗೆ ಈ ಕ್ರಮ ನಾಂದಿಯಾಗಲಿದೆ.

- ಕೂಬಾ ನಾಯ್ಕ್, ಮುಖ್ಯ ಶಿಕ್ಷಕ

- - -

-7ಜೆ.ಎಲ್.ಆರ್.1:

ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಪೋಷಕರ ಸಹಕಾರದಿಂದ ನಲಿ ಕಲಿಯ ಜೊತೆಗೆ ಆಂಗ್ಲ ಮಾಧ್ಯಮ ಬೋಧನೆಗೆ ಚಾಲನೆ ನೀಡಲಾಯಿತು.

PREV