ಅಂಗನವಾಡಿಗಳಿಗೂ ಬಂತು ಆಂಗ್ಲ ಪಠ್ಯ!

KannadaprabhaNewsNetwork |  
Published : Jun 21, 2025, 12:49 AM ISTUpdated : Jun 21, 2025, 02:35 PM IST
Anganwadi Recruitment 2025 in Tamil Nadu

ಸಾರಾಂಶ

  ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಹುಕ್ಕೇರಿ ತಾಲೂಕಿನ 478 ಅಂಗನವಾಡಿ ಕೇಂದ್ರಗಳ ಪೈಕಿ ಆಯ್ದ 78 ಕೇಂದ್ರಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಠ್ಯ ಬೋಧಿಸಲು ಸಿದ್ಧತಾ ಕಾರ್ಯಕ್ರಗಳು ಭರದಿಂದ ಸಾಗಿವೆ.

ರವಿ ಕಾಂಬಳೆ

 ಹುಕ್ಕೇರಿ :  ಖಾಸಗಿ ವಿದ್ಯಾ ಸಂಸ್ಥೆಗಳಿಗಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಪೂರ್ವ ಪ್ರಾಥಮಿಕ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಹುಕ್ಕೇರಿ ತಾಲೂಕಿನ 478 ಅಂಗನವಾಡಿ ಕೇಂದ್ರಗಳ ಪೈಕಿ ಆಯ್ದ 78 ಕೇಂದ್ರಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಠ್ಯ ಬೋಧಿಸಲು ಸಿದ್ಧತಾ ಕಾರ್ಯಕ್ರಗಳು ಭರದಿಂದ ಸಾಗಿವೆ.

ಪೋಷಕರ ಆಂಗ್ಲ ಮಾಧ್ಯಮ ಶಿಕ್ಷಣ ಮತ್ತು ಖಾಸಗಿ ಶಾಲೆಗಳ ವ್ಯಾಮೋಹವನ್ನೇ ಬಂಡವಾಳ ಮಾಡಿಕೊಂಡು ಪ್ರೀಕೆಜಿ ಹೆಸರಿನಲ್ಲಿ ಲಕ್ಷಾಂತರ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಸಕ್ತ ಸಾಲಿನಿಂದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸುತ್ತಿದೆ. ಇದರೊಂದಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾಥಮಿಕ ಪೂರ್ವ ಮಕ್ಕಳಿಗೆ ಕಥೆ, ಹಾಡು, ಆಟಗಳೊಂದಿಗೆ ಪಾಠ ಹೇಳಲು ಸಿದ್ಧತೆ ನಡೆಸಲಾಗಿದೆ.ಹುಕ್ಕೇರಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 78 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲಾಗುತ್ತಿದ್ದು, ಇದಕ್ಕಾಗಿ ಈ ಕೇಂದ್ರಗಳ ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ಹಂತದ ತರಬೇತಿ ಆಯೋಜಿಸಲಾಗುತ್ತಿದೆ. ಈ ತರಬೇತಿ ಆಯಾ ತಾಲೂಕು ಮಟ್ಟದಲ್ಲಿ ನಡೆಯಲಿದ್ದು ತರಬೇತಿಯಲ್ಲಿ ಮಕ್ಕಳಿಗೆ ಪಾಠ ಹೇಳುವ ವಿಧಾನ, ಇಂಗ್ಲಿಷ್ ಭಾಷಾ ಜ್ಞಾನ ಮತ್ತು ಸಂವಹನ ಕೌಶಲ್ಯ ಕುರಿತು ತಿಳಿಸುವ ಉದ್ದೇಶ ಹೊಂದಲಾಗಿದೆ.ಈಗಾಗಲೇ ಅಲ್ಲಿನ ಮಕ್ಕಳಿಗೆ ಪ್ರಿ ಸ್ಕೂಲ್ ಪರಿಕಲ್ಪನೆಯಡಿ ಊಟ, ಆಟ, ಹಾಡಿನ ಜತೆಗೆ ಪಾಠ ಹೇಳಲಾಗುತ್ತಿದೆ. ಇದಕ್ಕಾಗಿ ತಾಲೂಕಿನ ಆಯ್ದ ಅಂಗನವಾಡಿ ಕಾರ್ಯಕರ್ತೆಯರಿಗೂ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಮಕ್ಕಳಿಗೆ ಓದುವುದು, ಬರೆಯುವುದನ್ನು ಕಲಿಸುವ ಜತೆಗೆ ಗಣಿತ ಹೇಳಿ ಕೊಡಲಾಗುತ್ತಿದೆ. ಈ ಮೂಲಕ ಅವರಲ್ಲಿ ದೈಹಿಕ, ಸಾಮಾಜಿಕ, ಭಾವನಾತ್ಮಕ, ನೈತಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಮಾಡಲಾಗಿದೆ.

ಪಠ್ಯ ಪುಸ್ತಕ ಪೂರೈಕೆ:

ಅಂಗನವಾಡಿ ಮಕ್ಕಳಿಗಾಗಿ ಆರಂಭಿಸಲಾಗುತ್ತಿರುವ ಪೂರ್ವ ಪ್ರಾಥಮಿಕ ಶಿಕ್ಷಣದ ಪಠ್ಯಪುಸ್ತಕ ಈಗಾಗಲೇ ಪೂರೈಕೆಯಾಗಿದ್ದು, ತಾಲೂಕಿನ ಆಯ್ದ ಅಂಗನವಾಡಿ ಮಕ್ಕಳಿಗೂ ತಲಾ ಮೂರು ಪುಸ್ತಕಗಳನ್ನು ವಿತರಿಸಲಾಗುತ್ತದೆ. ಜತೆಗೆ ಮಕ್ಕಳಿಗೆ ಪಠ್ಯ ಬೋಧನೆಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೂ ಮಾರ್ಗದರ್ಶನ ಪುಸ್ತಕ ನೀಡಲಾಗುತ್ತಿದೆ. ಒಂದು ಮಗುವಿಗೆ ಮೂರು ಪುಸ್ತಕಗಳಿರುವ ಒಂದು ಸೆಟ್ ನೀಡಲಾಗುವುದು. ಜೊತೆಗೆ ಮಕ್ಕಳ ಕಲಿಕೆ ಉತ್ತೇಜಿಸುವ ಕಾರ್ಯಕ್ರಮಗಳ ಪ್ರಸಾರ ಮತ್ತು ಮನೋರಂಜನೆಗಾಗಿ 42 ಟಿವಿಗಳೂ ಬಂದಿವೆ.

ರೈತಾಪಿ, ಬಡ ವರ್ಗಕ್ಕೆ ಅನುಕೂಲ:

ಅಂಗನವಾಡಿ ಕೇಂದ್ರಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣದ ಜತೆಗೆ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸುತ್ತಿರುವುದು ಗ್ರಾಮೀಣ ಭಾಗದ ರೈತಾಪಿ ವರ್ಗ, ಮಧ್ಯಮ ಮತ್ತು ಬಡ ಕುಟುಂಬದವರಿಗೆ ಆಸರೆಯಾಗಿದೆ. ಇದರೊಂದಿಗೆ ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಕನಸಿಗೆ ಒತ್ತಾಸೆಯಾದಂತಾಗಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಲಕ್ಷಾಂತರ ಹಣ ವ್ಯಯಿಸುವ ಅಗತ್ಯವೂ ಇಲ್ಲದಂತಾಗಿದೆ.

ಪೋಷಕರ ಮನವೊಲಿಕೆ ಯತ್ನ:

ಅಂಗನವಾಡಿ ಕೇಂದ್ರಗಳಲ್ಲೂ ಖಾಸಗಿ ಶಾಲೆ ಮಾದರಿಯಂತೆ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲಾಗುತ್ತಿದ್ದು, ತಮ್ಮ ಮಕ್ಕಳನ್ನು ಅಂಗನವಾಡಿಗೆ ಸೇರಿಸುವಂತೆ ಆಯಾ ಗ್ರಾಮ ಮತ್ತು ಬಡಾವಣೆಗಳಲ್ಲಿ ಪೋಷಕರ ಮನವೊಲಿಸುವ ಪ್ರಯತ್ನ ನಡೆದಿದ್ದು ಇದು ಬಹುಪಾಲು ಯಶಸ್ವಿಯಾಗಿದೆ. ಕೇಂದ್ರಗಳಲ್ಲಿ ಗುಣಮಟ್ಟದ ಆಹಾರ ವಿತರಣೆ ಜತೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವುದು ಇಲಾಖೆಯ ಧ್ಯೇಯವಾಗಿದೆ.

ಪೂರ್ವ ಪ್ರಾಥಮಿಕ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸಲಾಗುತ್ತಿದೆ. ಇದಕ್ಕೆ ಹೆಚ್ಚು ಪೋಷಕರು ಅಂಗನವಾಡಿ ಕೇಂದ್ರಗಳಿಗೆ ಸ್ವಯಂ ಪ್ರೇರಿತವಾಗಿ ಮಕ್ಕಳನ್ನು ಸೇರಿಸಲು ಉತ್ಸುಕತೆ ತೋರಿಸಿದ್ದಾರೆ.

-ಸಿ.ಹರಿಪ್ರಸಾದ, ಸಿಡಿಪಿಒ ಹುಕ್ಕೇರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ