ಕಮಲಾಪುರ ಕೆರೆಯಲ್ಲಿ ಸತ್ತು ಬೀಳುತ್ತಿರುವ ಮೀನುಗಳು!

KannadaprabhaNewsNetwork |  
Published : Jun 21, 2025, 12:49 AM ISTUpdated : Jun 21, 2025, 12:25 PM IST
20ಎಚ್‌ಪಿಟಿ1- ಹೊಸಪೇಟೆಯ ಕಮಲಾಪುರ ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿವೆ. | Kannada Prabha

ಸಾರಾಂಶ

ಹೊಸಪೇಟೆ ಸಮೀಪದ ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ಮೀನುಗಳು ಸತ್ತುಬೀಳುತ್ತಿದ್ದು, ಈಗ ಪರಿಸರ ಪ್ರೇಮಿಗಳು ಹಾಗೂ ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ. ಈ ಕೆರೆಯಲ್ಲಿ ತ್ಯಾಜ್ಯ ಸೇರುತ್ತಿದೆ. ಜತೆಗೆ ರಾಸಾಯನಿಕ ಕೂಡ ಮಿಶ್ರಣವಾಗುತ್ತಿದೆ. ಗಣಿ ಅದಿರಿನ ಮಣ್ಣು ಕೂಡ ಸೇರಿಕೊಳ್ಳುತ್ತಿದೆ.

ಹೊಸಪೇಟೆ: ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ಮೀನುಗಳು ಸತ್ತು ಬೀಳುತ್ತಿದ್ದು, ಪರಿಸರ ಪ್ರೇಮಿಗಳು ಹಾಗೂ ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ.

ತುಂಗಭದ್ರಾ ಜಲಾಶಯದ ನೀರು ಹಾಗೂ ಮಳೆ ನೀರು ಈ ಕೆರೆಗೆ ಆಧಾರವಾಗಿದೆ. ಇನ್ನು ಬಸವಣ್ಣ ಹಾಗೂ ರಾಯ ಕಾಲುವೆಗಳ ನೀರು ಕೂಡ ಕೆರೆಗೆ ಬರುತ್ತಿದೆ. ಈ ಕೆರೆಯಲ್ಲಿ ರಾಸಾಯನಿಕ ಮಿಶ್ರಣಗೊಂಡು ಮೀನುಗಳು ಸತ್ತು ಬೀಳುತ್ತಿವೆ ಎಂಬ ಅನುಮಾನ ಕೂಡ ದಟ್ಟೈಸಿದೆ. ಹಾಗಾಗಿ ಈಗ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಅವರ ಸೂಚನೆ ಮೇರೆಗೆ ಮೀನುಗಾರಿಕೆ ಇಲಾಖೆ ಮತ್ತು ಪರಿಸರ ಇಲಾಖೆ ಅಧಿಕಾರಿಗಳು ಕಮಲಾಪುರ ಕೆರೆಗೆ ಭೇಟಿ ನೀಡಿ ಸತ್ತು ಬಿದ್ದಿರುವ ಮೀನು ಮತ್ತು ನೀರನ್ನು ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ವಿಜಯನಗರ ಆಳರಸರ ಕಾಲದ ಕಮಲಾಪುರ ಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಕೆರೆಯಲ್ಲಿ ತ್ಯಾಜ್ಯ ಸೇರುತ್ತಿದೆ. ಜತೆಗೆ ರಾಸಾಯನಿಕ ಕೂಡ ಮಿಶ್ರಣವಾಗುತ್ತಿದೆ. ಗಣಿ ಅದಿರಿನ ಮಣ್ಣು ಕೂಡ ಸೇರಿಕೊಳ್ಳುತ್ತಿದೆ. ಈ ಕೆರೆಯಲ್ಲಿ ಆಮ್ಲಜನಕದ ಕೊರತೆಯಿಂದ ಮೀನುಗಳು ಸತ್ತಿರಬಹುದು ಎಂದು ಪರಿಸರ ಪ್ರೇಮಿ ಸಮದ್‌ ಕೊಟ್ಟೂರು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆಯಲ್ಲಿ ಈ ಕೆರೆಯಲ್ಲಿ ಕಮಲಾಪುರದ ಕೆಲ ವಾರ್ಡ್‌ಗಳ ತ್ಯಾಜ್ಯ ಕೂಡ ಸೇರಿಕೊಳ್ಳುತ್ತಿದೆ. ಹೊಸಪೇಟೆ ನಗರದ ತ್ಯಾಜ್ಯ ಬಸವಣ್ಣ ಕಾಲುವೆ ಒಡಲು ಸೇರಿಕೊಳ್ಳುತ್ತಿದೆ. ಈ ನೀರು ಕೂಡ ಕಮಲಾಪುರ ಕೆರೆಗೆ ಬರುತ್ತಿದೆ. ಹಾಗಾಗಿ ಇದರಿಂದ ಕೂಡ ಸಮಸ್ಯೆ ಆಗಿರಬಹುದು ಎಂಬ ಅನುಮಾನ ಕೂಡ ಸ್ಥಳೀಯ ಜನರಲ್ಲಿ ಒಡಮೂಡಿದೆ.

ಕಮಲಾಪುರದ ಕೆರೆ ಮೀನುಗಳು ಸತ್ತುಬೀಳುತ್ತಿರುವುದರಿಂದ ಮೀನುಗಾರರು ಹಾಗೂ ಸ್ಥಳೀಯ ಜನರು ಕೂಡ ಆತಂಕಗೊಂಡು ತಹಸೀಲ್ದಾರ್ ಶ್ರುತಿ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ತಕ್ಷಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರು ಹಾಗೂ ಸತ್ತು ಬಿದ್ದ ಮೀನನ್ನು ಕೂಡ ತೆಗೆದುಕೊಂಡು ಹೋಗಿದ್ದಾರೆ. "ಈ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ನಿಖರ ಕಾರಣ ತಿಳಿದು ಬರಲಿದೆ " ಎಂದು ತಹಸೀಲ್ದಾರ್‌ ಶ್ರುತಿ ಅವರು ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು, ಈ ಬಗ್ಗೆ ನಿಖರ ಕಾರಣ ತಿಳಿದುಕೊಳ್ಳಬೇಕು. ನೀರಾವರಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಸತ್ಯಾಂಶ ತಿಳಿಯಲು ಕ್ರಮವಹಿಸಬೇಕು. ಕೆರೆಯಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದೂ ಸೂಚಿಸಿದರು.

ಮೀನು ಸುರಕ್ಷತೆಗೆ ಕ್ರಮ: ಕಮಲಾಪುರ ಕೆರೆ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವರದಿ ಬಂದ ಬಳಿಕಷ್ಟೇ ನಿಖರ ಕಾರಣ ತಿಳಿಯಲಿದೆ. ನಾವು ಮೊದಲು ಕೆರೆ ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತವೆ. ಮೀನುಗಳ ಸುರಕ್ಷತೆಗೂ ಕ್ರಮವಹಿಸಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ