ಸಂಪನ್ನಗೊಂಡ ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾಯಾತ್ರೆ

KannadaprabhaNewsNetwork | Published : Sep 23, 2024 1:25 AM

ಸಾರಾಂಶ

ಪಟ್ಟಣದಲ್ಲಿ ವಿಶ್ವ ಹಿಂದೂ ಮಹಾ ಗಣಪತಿ ಮಹೋತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ 11 ನೇ ವರ್ಷದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮೆರವಣಿಗೆ ವಿಜೃಂಭಣೆಯಿಂದ ಭಾನುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಪಟ್ಟಣದಲ್ಲಿ ವಿಶ್ವ ಹಿಂದೂ ಮಹಾ ಗಣಪತಿ ಮಹೋತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ 11 ನೇ ವರ್ಷದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮೆರವಣಿಗೆ ವಿಜೃಂಭಣೆಯಿಂದ ಭಾನುವಾರ ನಡೆಯಿತು. ಚಿತ್ರದುರ್ಗ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿ, ಶ್ರೀ ಕೃಷ್ಣ ಯಾದವನಂದ ಸ್ವಾಮೀಜಿ ಶಾಸಕ ಡಾ. ಎಂ. ಚಂದಪ್ಪ ಅವರು ಗಣಪತಿ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಹೂವಿನ ಆಲಂಕೃತವಾದ ಟ್ರಾಕ್ಟರ್‌ನಲ್ಲಿ ಮೂರ್ತಿಯನ್ನು ಕೂರಿಸಿ ಚಿತ್ರದುರ್ಗ ರಸ್ತೆ, ಪೆಟ್ರೋಲ್‌ ಬಂಕ್‌ ಮುಂಭಾಗದಲ್ಲಿ ಬೃಹತ್‌ ಶೋಭಾಯಾತ್ರೆ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಚಂಡೆ ವಾಧ್ಯ ಹಾಗು ಡಿ.ಜೆ ಸದ್ದಿಗೆ ಯುವಕರು ಯುವತಿಯರು, ಮಕ್ಕಳು, ಜನರು ಬಿಸಲನ್ನು ಲೆಕ್ಕಿಸದೇ ನೃತ್ಯ ಮಾಡಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕೇಸರಿ ಬಣ್ಣದ ಪೇಟಾ ಧರಿಸಿ ಓಂಕಾರ ಬಾವುಟ ಹಿಡಿದು ಗಣಪತಿಗೆ ಜೈಕಾರ ಹಾಕುತ್ತಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಶುಕ್ರವಾರ ಪಟ್ಟಣ ಸಂಪೂರ್ಣವಾಗಿ ಕೇಸರಿ ಮಯವಾಗಿತ್ತು. ಮುಖ್ಯ ರಸ್ತೆಯಲ್ಲಿ ಸಾಗಿದ ಭವ್ಯ ಮೆರವಣಿಗೆಯನ್ನು ಜನರು ರಸ್ತೆಯ ಎರಡು ಬದಿಯಲ್ಲಿ ಹಾಗು ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು. ಶೋಭಾಯಾತ್ರೆಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಸಹಸ್ರಾರು ಜನರಿಗೆ ಪುರಸಭೆ ಕಚೇರಿ ಮುಂಭಾಂಗದಲ್ಲಿ ಬೆಳಗ್ಗೆನಿಂದಲೇ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಪಟ್ಟಣದ ಎಲ್ಲಾ ಅಂಗಡಿ ಹೋಟೆಲ್‌ ಮುಂಗಟ್ಟುಗಳು ಅಘೋಷಿತ ಬಂದ್‌ ಮಾಡಿ ಶೋಭಾಯಾತ್ರೆಗೆ ಬೆಂಬಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶೋಭಾಯಾತ್ರೆಗೆ ಪೋಲೀಸ್‌ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿತ್ತು. ಗಣೇಶನ ವಿಸರ್ಜನೆಯ ಎಲ್ಲಾ ಹಂತಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು.

ಮೆರವಣಿಗೆ ಪ್ರಯುಕ್ತ ಪಟ್ಟಣಕ್ಕೆ ಬರುವ ವಾಹನಗಳನ್ನು ನಿಷೇಧಿಸಲಾಗಿತ್ತು. ಶೋಭಾಯಾತ್ರೆ ಚಿತ್ರದುರ್ಗ ರಸ್ತೆಯಿಂದ ಪ್ರಾರಂಭವಾಗಿ ಪಟ್ಟಣದ ಮುಖ್ಯ ವೃತ್ತ ದಾವಣಗೆರೆ ಕ್ರಾಸ್‌ ಮೂಲಕ ಸಾಗಿದ ಗಣಪನನ್ನು ಶಿವಮೊಗ್ಗ ರಸ್ತೆಯ ತಾಲೂಕು ಪಂಚಾಯಿತಿ ಕಚೇರಿ ಹಿಂಭಾಗದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿ ರಾತ್ರಿ ವಿಸರ್ಜನೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್‌ ದಕ್ಷಣ ಪ್ರಾಂತ ಧರ್ಮ ಪ್ರಸಾರ ಪ್ರಮುಕರಾದ ಕೆ.ಆರ್‌. ಸುನೀಲ್‌, ಮಂಜುನಾಥ್‌ ಸ್ವಾಮಿ, ಶಿವಮೊಗ್ಗ ವಿಭಾಗೀಯ ಕಾರ್ಯದರ್ಶಿ ಚಂದ್ರಶೇಖರ್‌, ಹಿಂದೂ ಮಹಾ ಗಣಪತಿ ಗೌರವಾಧ್ಯಕ್ಷ ಗೋಪಾಲಸ್ವಾಮಿ ನಾಯಕ, ಸಮಿತಿ ಅಧ್ಯಕ್ಷ ಹೀರಾಲಾಲ್‌, ಕಾರ್ಯದರ್ಶಿ ಜೆ. ಭೈರೇಶ್‌, ಖಜಾಂಚಿ ಎಚ್‌ ಬಿ. ವಿಜಯಕುಮಾರ್‌, ಹಿಂದೂ ಗಿರೀಶ್‌, ಪುರಸಭೆ ಸದಸ್ಯರಾದ ಆರ್‌.ಎ.ಆಶೋಕ್‌, ಮಲ್ಲಿಕಾರ್ಜುನ ಸ್ವಾಮಿ, ಬಸವರಾಜ್‌ ಯಾದವ್‌, ಅಣ್ಣಪ್ಪ, ಮನು, ವಿಶ್ವ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಸದಸ್ಯರು ಭಾಗವಹಿಸಿದ್ದರು.

Share this article