ಮುಂಡರಗಿ: ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಹೆಚ್ಚಿನ ಸಾಧನೆ ಮಾಡುವ ಮೂಲಕ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಉನ್ನತ ಹುದ್ದೆಯನ್ನೇರಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಪಾಲಕರು ಆಡಂಬರಕ್ಕೆ ಮಾರುಹೋಗದೇ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ವರ್ತಕ ರಜನಿಕಾಂತ ದೇಸಾಯಿ ಮನವಿ ಮಾಡಿದರು.
ಶಾಲೆಯಲ್ಲಿ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ಪೂರಕವಾಗುವ ವಾತಾವರಣವನ್ನು ಇಲ್ಲಿನ ಮುಖ್ಯೋಪಾಧ್ಯಾಯ ಬಸವರಾಜ ಹೆಬ್ಲಿ ಅವರು ನಿರ್ಮಾಣ ಮಾಡಿದ್ದು, ಮಗುವಿನ ಕಲಿಕೆಗೆ ತಕ್ಕಂತೆ ಪಾಲಕರು ಶಾಲೆಗೆ ದಾಖಲಿಸಬೇಕು. ಜತೆಗೆ ಆಗಾಗ್ಗೆ ಶಾಲೆಗೆ ತೆರಳಿ ಕಲಿಕೆಯ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಶೋಭಾ ಮೇಟಿ, ಶಾಲಾ ಭೂದಾನಿ ಡಾ. ಬಸವರಾಜ ಮೇಟಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿ ಕಲಿತಿರುವುದರಿಂದ ಆ ಋಣವನ್ನು ತೀರಿಸುವುದಕ್ಕಾಗಿ 2 ಎಕರೆ ಜಮೀನು ದಾನ ನೀಡಲಾಗಿದೆ ಎಂದರು.ಸಿಆರ್‌ಪಿಗಳಾದ ಐ.ಎಸ್. ಮುಲ್ಲಾ, ಎಸ್.ಎಚ್. ಇಟಗಿ ಮಾತನಾಡಿ, 6 ವರ್ಷ ತುಂಬಿದ ಮಗುವನ್ನು 1ನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ತಾಲೂಕಿನ ಕೆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪಟ್ಟಣದ ಎಸ್.ಎಸ್. ಪಾಟೀಲ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತಮ್ಮ ಸರ್ಕಾರಿ ಶಾಲೆಗಳಿಗೆ 1ನೇ ತರಗತಿಗೆ ದಾಖಲಾಗುವ ಮಗುವಿನ ಹೆಸರಿನಲ್ಲಿ ₹1 ಸಾವಿರ ಎಫ್‌ಡಿ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಮಂಗಳವಾರ ಸಂಜೆ ಜರುಗಿದ ಭೀಮಾಂಬಿಕಾ ನಗರದ ದಾಖಲಾತಿ ಕಾರ್ಯಕ್ರಮದಲ್ಲಿ ಸಿಆರ್‌ಪಿ ಐ.ಎಸ್. ಮುಲ್ಲಾ ಇಲ್ಲಿನ ಶಾಲೆಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ₹1 ಸಾವಿರ ಎಫ್‌ಡಿ ಇಡುವುದಾಗಿ ಘೋಷಿಸಿದರು.