ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಟಾಸ್ಕ್ ಫೋರ್ಸ್ ಸಭೆ ನಡೆಸಿದ ಅವರು ಹೇಮಾವತಿ ನೀರನ್ನು ಹರಿಸದಿರುವ ಕಾರಣಕ್ಕೆ ನೀರಿನ ಅಭಾವ ತಲೆದೋರಿದೆ. ತಾಲೂಕಿಗೆ ಹೊಸದಾಗಿ 13 ಬೋರ್ ವೆಲ್ ಕೊರೆಸಲು ಅನುದಾನ ಬಂದಿದೆ. ಕೂಡಲೇ ಅಗತ್ಯವಿರುವೆಡೆ ಬೋರ್ ವೆಲ್ ಕೊರೆಸಿ. ಈಗಾಗಲೇ 20 ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. 15ಕ್ಕೆ ವಿದ್ಯುತ್ ಸಂಪರ್ಕ ನೀಡಬೇಕಿದೆ. ನೀರಿನ ಇಳುವರಿ ಕಡಿಮೆ ಇರುವ ಪ್ರದೇಶಗಳಲ್ಲಿ ಹೊಸದಾಗಿ ಬೋರ್ ಕೊರೆಯುವಂತೆ ಸೂಚಿಸಿದರು.ಹಲವಾರು ಕಡೆ ಪೈಪ್ ಲೈನ್ ಮತ್ತು ಹೆಚ್ಚು ಆಳ ಕೊರೆಸುವ ಕಾರ್ಯ ಆಗಬೇಕಿದೆ. ತಂಡಗ ಮತ್ತು ಮಾಯಸಂದ್ರದಲ್ಲಿರುವ ಮುಖ್ಯ ಗ್ರಾಮಗಳ ಕುಡಿಯುವ ನೀರು ಒದಗಿಸುವ ಸಂಗ್ರಹಾಲಯದಲ್ಲಿ ಸದ್ಯ ಇರುವ ಮರಳನ್ನು ಹೊರತೆಗೆದು ಹೊಸ ಮರಳನ್ನು ಹಾಕುವ ಪ್ರಕ್ರಿಯೆ ನಡೆಯಬೇಕು. ಈ ಎಲ್ಲಾ ಪ್ರಕ್ರಿಯೆಗೆ 86 ಲಕ್ಷ ರು. ಗಳ ಕ್ರಿಯಾ ಯೋಜನೆ ತಯಾರಿಸಿ ಶೀಘ್ರವಾಗಿ ಯೋಜನೆ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಸೂಚಿಸಿದರು. ಪಶು ಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕರ ಡಾ.ರೇವಣ ಸಿದ್ದಪ್ಪ ಮಾತನಾಡಿ, ರೈತಾಪಿಗಳಿಗೆ ಉಚಿತವಾಗಿ ಮೇವಿನ ಬಿತ್ತನೆ ಬೀಜಗಳನ್ನು ವಿತರಿಸಿ. ನೀರಿನ ಸೌಕರ್ಯ ಇರುವ ರೈತರನ್ನು ಮೇವು ಬೆಳೆಯುವಂತೆ ಪ್ರೇರೇಪಿಸುತ್ತಿದ್ದೇವೆ. ತದ ನಂತರ ಅವರಿಂದಲೇ ಮೇವನ್ನು ಖರೀದಿ ಮಾಡಲು ಯೋಜಿಸಲಾಗಿದೆ ಎಂದರು. ತಾಲೂಕಿನಲ್ಲಿ ಮಳೆಯ ಕೊರೆತೆ ಇರುವ ಕಾರಣಕ್ಕೆ ಬಿತ್ತನೆ ಪ್ರಮಾಣದಲ್ಲಿ ಕಡಿಮೆ ಆಗಿದೆ. ರಾಗಿ ಬಿತ್ತನೆ ಇಲ್ಲದಾಗಿದೆ. ಹೆಸರು ಮತ್ತು ಉದ್ದಿನ ಬೀಜ ಹಾಕಲಾಗಿದೆ. ಆದರೆ ಮಳೆಯ ಕೊರೆತೆಯ ಕಾರಣ ಅವು ನಶಿಸಿ ಹೋಗಿವೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪೂಜಾ ಸಭೆಗೆ ತಿಳಿಸಿದರು. ತಾಲೂಕಿನಲ್ಲಿ ಡೆಂಗ್ಯೂ ಬಗ್ಗೆ ಬಹಳ ಜಾಗ್ರತೆ ವಹಿಸಬೇಕೆಂದು ನೂತನ ತಾಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಗೆ ಶಾಸಕರು ಸೂಚಿಸಿದರು.
ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಸಂಬಂಧ ಸುಮಾರು 52 ಎಕರೆ ಜಮೀನು ಅವಶ್ಯವಿದೆ. ಆದರೆ ಸದ್ಯ 35 ಎಕರೆ ಜಮೀನನ್ನು ಗುರುತಿಸಲಾಗಿದೆ. ಆದರೆ ಉಳಿಕೆ ಜಮೀನಿನಲ್ಲಿ ನಿವೇಶನ ಮಾರ್ಪಾಟು ಅಸಾಧ್ಯದ ಮಾತಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆನಂದ ರಾಜ್ ಸಭೆಗೆ ತಿಳಿಸಿದರು. ಪಟ್ಟಣಕ್ಕೆ ಹತ್ತಿರವಿರುವೆಡೆ 20/30 ನಿವೇಶನ ನೀಡಿದರೆ, ಗ್ರಾಮಾಂತರ ಪ್ರದೇಶದಲ್ಲಿ 30/40 ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಕುಂ ಇ ಅಹಮದ್ ತಿಳಿಸಿದರು.ಅಂತಿಮವಾಗಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಒ ಗಳೊಂದಿಗೆ ಸಭೆ ನಡೆಸಿ ಯಾರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು. ನೀರಿನ ತೊಂದರೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕವಾದರೂ ಸಹ ನೀರು ಕೊಡಲೇಬೇಕೆಂದು ತಾಕೀತು ಮಾಡಿದರು. ವಿ ಬಿ ಜಿ ರಾಮ್ ಯೋಜನೆಯಡಿ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿ ಜನರು ಬೇರೆಡೆಗೆ ಗುಳೆ ಹೋಗದಂತೆ ಕ್ರಮ ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಕೂಡಲೇ ವಿದ್ಯುತ್ ಸಂಪರ್ಕ ನೀಡಿ ಸಮಸ್ಯೆ ಬಗೆಹರಿಸುವಂತೆ ಬೆಸ್ಕಾಂ ಎಇಇ ರಾಜಶೇಖರ್ ಗೆ ಶಾಸಕರು ಸೂಚಿಸಿದರು. ಜೆ ಜೆ ಎಂ ನ ಕಾಮಗಾರಿ ಬಹುತೇಕ ಕಡೆ ಅಪೂರ್ಣವಾಗಿದೆ. ಕೂಡಲೇ ಅವೆಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ತ್ವರಿತವಾಗಿ ಜನರಿಗೆ ನೀರನ್ನು ಒದಗಿಸಬೇಕೆಂದು ಕುಡಿಯುವ ನೀರಿನ ಇಲಾಖಾ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.