ಹರಪನಹಳ್ಳಿ: ತಾಲೂಕಿನಲ್ಲಿ ತೀವ್ರ ಬರಗಾಲವಿದೆ, ಕೂಲಿಕಾರರು ಗುಳೇ ಹೋಗದಂತೆ ನೋಡಿಕೊಳ್ಳಿ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.
ವಿಬಿಜಿ ರಾಂ ಜಿ ಯೋಜನೆಯಲ್ಲಿ ಸರ್ಕಾರದ ನಿರ್ದೆಶನದಂತೆ ಸಮರ್ಪಕವಾಗಿ ಕೂಲಿ ಕೆಲಸ ಕೊಡಿ, ಕುಡಿಯುವ ನೀರಿನ ಸಮಸ್ಯೆ ಆಗದಂತೆ ನಿಗಾವಹಿಸಿ, ದಿನನಿತ್ಯದ ಕೆಲಸ ಕಾರ್ಯಗಳಿಗೆ ಜನರು ತಮ್ಮ ಕಚೇರಿಗಳಿಗೆ ಬಂದಾಗ ಅಲೆದಾಡಿಸದೆ ತ್ವರಿತವಾಗಿ ಕೆಲಸ ಮಾಡಿ ಕೊಡಿ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಾಕೀತು ಮಾಡಿದರು.
ಸರ್ಕಾರಿ ಎಲ್ಲ ಇಲಾಖೆಗಳಲ್ಲಿ ಲಂಚ ಅವರ್ ಎಂದು ಮದ್ಯಾಹ್ನ 1.30ಕ್ಕೆ ಹೊರಗಡೆ ಹೋದರೆ 2.30ಕ್ಕೆ ವಾಪಸ್ ಬರುವುದಿಲ್ಲ, 3.30ಕ್ಕೆ ಬರುತ್ತಾರೆ, ಪುನಃ 4 ಗಂಟೆಗೆ ಟೀ ಕುಡಿಯಲು ತೆರಳುತ್ತಾರೆ, 4.30 ಕ್ಕೆ ಕಚೇರಿ ಬಿಟ್ಚು ಮನೆಗೆ ಹೋಗುತ್ತಾರೆ, ಜನರು ಹಳ್ಳಿಯಿಂದ ಬಂದಾಗ ನೌಕರರು ತಮ್ಮ ತಮ್ಮ ಟೇಬಲ್ ಮೇಲೆ ಇಲ್ಲದಿದ್ದರೆ ಜನರ ಕಷ್ಟ ಕೇಳುವವರು ಯಾರು ಎಂದು ಪ್ರಶ್ನಿಸಿದ ಅವರು ಈ ಸಂಬಂಧ ಇಲಾಖಾ ಮುಖ್ಯಸ್ಥರು ಗಮನಹರಿಸಬೇಕು ಎಂದು ಸೂಚಿಸಿದರು.ತಹಸೀಲ್ದಾರ ಬಿ.ವಿ.ಗಿರೀಶಬಾಬು ಮಾತನಾಡಿ, ಸರ್ಕಾರಿ ಭೂಮಿ ಯಾವುದೇ ಅಧಿಕಾರಿಗಳು ಇತರರಿಗೆ ಪರಭಾರೆ ಮಾಡುವುದು ಕಾನೂನು ಬಾಹೀರ, ಅಕಸ್ಮಾತ್ ಪರಭಾರೆ ಮಾಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ ಎಂದು ಪಿಡಿಒ ಹಾಗೂ ಇತರೆ ಅಧಿಕಾರಿಗಳಿಗೆ ಎಚ್ಚರಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಂಜನಾಯ್ಕ ಅವರು ತಾಲೂಕಿನಲ್ಲಿ 68 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, 43 ಖಾಸಗಿ ಕೊಳವೆ ಬಾವಿಗಳಿಂದ ನೀರನ್ನು ಪಡೆದು ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳಿದರು.
ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಅನುದಾನ ಬಂದಿಲ್ಲ ಎಂದು ಪಿಡಿಒಗಳು ಹೇಳಿದರು. ನಿಟ್ಟೂರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿ ಸಾಕಾಗಿದೆ ಎಂದಾಗ ಅಲ್ಲಿಯ ಪಿಡಿಒ ನನಗೂ ತೊಂದರೆ ಕೊಡುತ್ತಾರೆ ಎಂದು ಮಾರುತ್ತರ ನೀಡುತ್ತಾನೆ, ಆಗ ಶಾಸಕರು ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಸೂಚಿಸುತ್ತಾರೆ.
ವಿಬಿಜಿ ರಾಂ ಜೀ ಯೋಜನೆಯ ಸಹಾಯಕ ನಿರ್ದೆಶಕ ಸೋಮಶೇಖರ ತಾಲೂಕಿನಲ್ಲಿ 144 ಸ್ಮಶಾಸನ ಹದ್ದು ಬಸ್ತು ಮಾಡಲು ತೆಗೆದುಕೊಂಡಿದ್ದೇವೆ, ಅದರಲ್ಲಿ 103 ಪೂರ್ಣಗೊಂಡಿವೆ, ಗುಂಡಗತ್ತಿ ಹಾಗೂ ಕೆರೆಗುಡಿಹಳ್ಳಿ ಗ್ರಾಮಗಳ ಸ್ಮಶಾನ ಅಭಿವೃದ್ಧಿಗೆ ಹೊಸದಾಗಿ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.
ಅಕ್ಷರ ದಾಸೋಹದ ಎ.ಡಿ. ನಾಗರಾಜ, ತೋಟಗಾರಿಕೆಯ ಜಯಸಿಂಹ, ಪಿಆರ್ ಇಡಿ ಕುಬೇಂದ್ರನಾಯ್ಕ, ಬಿಸಿಎಂ ಇಲಾಖೆಯ ಭೀಮಪ್ಪ, ಸಿಡಿಪಿಒ ರಾಮನಗೌಡ, ಲೋಕೋಪಯೋಗಿ ಇಲಾಖೆಯ ರಾಘವೇಂದ್ರ, ಅರಣ್ಯ ಇಲಾಖೆಯ ಗಿರೀಶ, ದೇವರಾಜ ತಮ್ಮ ತಮ್ಮ ಇಲಾಖೆಯ ಪ್ರಗತಿ ವರದಿ ಮಂಡಿಸಿದರು.