ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಿ

KannadaprabhaNewsNetwork |  
Published : Oct 28, 2024, 12:57 AM IST
೨೭ಎಚ್‌ವಿಆರ್೧ | Kannada Prabha

ಸಾರಾಂಶ

ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡ ಐಎಎಸ್ ಅಧಿಕಾರಿ ಕಮಲರಾಮ ಮೀನಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾವೇರಿ: ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡ ಐಎಎಸ್ ಅಧಿಕಾರಿ ಕಮಲರಾಮ ಮೀನಾ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ಕುರಿತು ಜರುಗಿದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಜಿಲ್ಲೆಯಲ್ಲಿ ಕೈಗೊಂಡ ಚುನಾವಣಾ ಕಾರ್ಯಕ್ರಮ ಮಾಹಿತಿ ಪಡೆದು ಮಾತನಾಡಿದ ಅವರು, ಪ್ರತಿ ಮತಗಟ್ಟೆಗಳಲ್ಲಿ ರ‍್ಯಾಂಪ್, ಶೌಚಾಲಯ, ಬೆಳಕು ಸೇರಿದಂತೆ ಮೂಲಭೂತ ಸೌಕರ್ಯಗಳು ಇರಬೇಕು ಎಂದು ತಿಳಿಸಿದರು.ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟ್‌ಗಳ ಮೇಲೆ ತೀವ್ರ ನಿಗಾವಹಿಸಬೇಕು. ಬ್ಯಾಂಕುಗಳಲ್ಲಿ ಹಣ ವರ್ಗಾವಣೆ ಬಗ್ಗೆ ಗಮನಹರಿಸಬೇಕು. ಶಿಗ್ಗಾಂವಿ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ನಾನು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಏನೇ ಸಮಸ್ಯೆಗಳಿದ್ದರೂ ಪರಿಹರಿಸುವ ಕೆಲಸವಾಗಬೇಕು. ಚುನಾವಣಾ ಕಾರ್ಯವನ್ನು ಎಲ್ಲರೂ ಒಟ್ಟಾಗಿ ಮಾಡೋಣ ಎಂದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ೨೬ ಅಭ್ಯರ್ಥಿಗಳಿಂದ ೪೬ ನಾಮಪತ್ರ ಸಲ್ಲಿಕೆಯಾಗಿವೆ. ಅ. ೨೮ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ ಹಾಗೂ ಅ.೩೦ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ ಎಂದರು. ಶಿಗ್ಗಾಂವ ವಿಧಾನಸಭಾ ಕ್ಷೇತ್ರದಲ್ಲಿ ೧,೨೧,೪೪೭ ಪುರುಷರು, ೧,೧೬,೦೭೬ ಮಹಿಳೆಯರು, ೬ ಜನ ಇತರರು ಸೇರಿದಂತೆ ೨,೩೭,೫೨೯ ಮತದಾರರಿದ್ದಾರೆ. ೨೪೧ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೯೨ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ ರ‍್ಯಾಂಪ್, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಕ ಸೌಕರ್ಯ ಕಲ್ಪಿಸಲಾಗಿದೆ. ೪೪೫ ಪಿಆರ್‌ಒ, ೬೨೪ ಎಪಿಆರ್‌ಒ ಹಾಗೂ ೯೫೦ ಪೊಗಳು ಸೇರಿ ೨೦೩೭ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಆರ್‌ಒಗಳಿಗೆ ಅ.೨೯ ರಂದು ಮೊದಲ ಹಂತದ ತರಬೇತಿ ಹಾಗೂ ನ.೭ ರಂದು ಎರಡನೇ ಹಂತದ ತರಬೇತಿ ನಡೆಯಲಿದೆ. ೪೮೨ ಬ್ಯಾಲೆಟ್ ಯುನಿಟ್, ೮೮೧ ವಿವಿ ಪ್ಯಾಟ್ ಹಾಗೂ೪೭೨ ಕಂಟ್ರೋಲ್ ಯುನಿಟ್‌ಗಳನ್ನು ರಾಜಕೀಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ರ‍್ಯಾಂಡಮೈಸ್ ಮಾಡಲಾಗಿದೆ. ಎರಡನೇ ಹಂತದ ರ‍್ಯಾಂಡಮೈಜೇಷನ್ ನ.೪ ರಂದು ಜರುಗಲಿದೆ. ಸುಗಮ ಚುನಾವಣೆ ಹಾಗೂ ಮಾದರಿ ನೀತಿ ಸಂಹಿತೆ ಪಾಲನೆಗೆ ೨೩ ಸೆಕ್ಟರ್ ಅಧಿಕಾರಿಗಳ ತಂಡ ರಚಿಸಲಾಗಿದೆ. ವಿಡಿಯೋ ಸರ್ವಲೆನ್ಸ್ ತಂಡಗಳು, ವಿಡಿಯೋ ಪರಿಶೀಲನೆ ತಂಡ, ಪ್ಲೈಯಿಂಗ್ ಸ್ಕ್ವಾಡ್, ವೆಚ್ಚ ಪರಿಶೀಲನಾ ತಂಡ, ೧೮ ಎಸ್.ಎಸ್.ಟಿ. ತಂಡ ರಚಿಸಲಾಗಿದೆ. ಜಿಲ್ಲೆಯಾದ್ಯಂತ ೧೮ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.ಶಿಗ್ಗಾಂವ ವಿಧಾನಸಭಾ ಉಪ ಚುನಾವಣೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ೦೮೩೭೫-೨೦೦೩೮೩ ಹಾಗೂ ಶಿಗ್ಗಾಂವಿಯಲ್ಲಿ ೦೮೩೭೮-೨೨೨೪೬೮ ಸಹಾಯವಾಣಿಯನ್ನು ಕಂಟ್ರೋಲ್ ರೂಂ ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ೧೯೫೦ ಸ್ಥಾಪಿಸಲಾಗಿದೆ ಎಂದರು.ಸೇವಾ ಮತದಾರರು, ಎವಿಇಎಸ್ ಮತದಾರರು, ಹಿರಿಯ ನಾಗರಿಕರ ಮತದಾರರು, ವಿಕಲಚೇತನ ಮತದಾರರು ಸೇರಿದಂತೆ ಶಿಗ್ಗಾಂವ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಕೈಗೊಂಡ ಸಿದ್ಧತೆಗಳ ಮಾಹಿತಿ ನೀಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ್ ಶ್ರೀಧರ ಅವರು ಮಾತನಾಡಿ, ಸ್ವೀಪ್ ಚುಟುವಟಿಕೆ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ರಂಗೋಲಿ, ಚಿತ್ರಕಲೆ, ಮಕ್ಕಳಿಂದ ಪಾಲಕರಿಗೆ ಪತ್ರ ಬರೆಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಗ್ಗಾಂವಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ೧೩೩ ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಕೇಂದ್ರಕ್ಕೆ ಒಂದರಂತೆ ೨೪೧ ಚುನಾವಣಾ ಜಾಗೃತಿ ಸಂಘಗಳನ್ನು ರಚಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿ ೨೪ ಕ್ಯಾಂಪಸ್ ಅಂಬಾಸಿಡರ್‌ಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ.೭೯.೯೪ ರಷ್ಟು ಮತದಾನವಾಗಿದ್ದು, ಶೇ.೮೧ ರಷ್ಟು ಪುರುಷ ಹಾಗೂ ಶೇ.೭೭.೮೨ ರಷ್ಟು ಮಹಿಳಾ ಮತದಾನವಾಗಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಮತದಾನ ಪ್ರಮಾಣ ಕಡಿಮೆಯಾದ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಗಂಗಿಭಾವಿ ಹಾಗೂ ಶಿಗ್ಗಾಂವ ಮತ್ತು ಸವಣೂರ ಪಟ್ಟಣದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣಕಡಿಮೆಯಾಗಿದ್ದು, ಈ ಪ್ರದೇಶಗಳನ್ನು ಮತದಾನ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಐದು ಸಖಿ, ತಲಾ ಒಂದರಂತೆ ವಿಕಲಚೇತನ ಸ್ನೇಹಿ, ಯುವ ಮತದಾರರ ಹಾಗೂ ಥೀಮ್‌ಬೇಸ್ಡ್ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಮತದಾರರಿಗೆ ಮತದಾನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಚುನಾವಣಾ ರಾಯಭಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು ಮಾತನಾಡಿ, ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಎಲ್ಲ ಮತಗಟ್ಟೆಗಳಿಗೆ ಓರ್ವ ಎಎಸ್‌ಐ, ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಹೋಂಗಾರ್ಡ್ ನೇಮಕ ಮಾಡಲಾಗಿದೆ. ಎಲ್ಲ ಚೆಕ್ ಪೋಸ್ಟ್‌ಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆ ಸೇರಿದಂತೆ ೭೩೭ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ವೆಚ್ಚ ವೀಕ್ಷಕರಾದ ಐಆರ್‌ಎಸ್ ಅಧಿಕಾರಿ ಡಿ.ಎಂ. ನಿಂಜೆ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ, ಸವಣೂರ ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಮಹ್ಮದ್ ಖಿಜರ್, ಹಾವೇರಿ ಉಪವಿಭಾಗಾಧಿಕಾರಿ ಚನ್ನಪ್ಪ, ಶಿಗ್ಗಾಂವಿ ತಹಸೀಲ್ದಾರ ಹಾಗೂ ಸಹಾಯಕ ಚುನಾವಣಾಧಿಕಾರಿ ಸಂತೋಷ ಹಿರೇಮಠ, ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!