ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗದಂತೆ ನಿಗಾವಹಿಸಿ

KannadaprabhaNewsNetwork | Published : Apr 18, 2025 12:39 AM

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ತಾಳಿಕೋಟೆ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದ ಹಾಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿಗೆ ಸಂಬಂಧಿಸಿದ ದೇವರ ಹಿಪ್ಪರಗಿ ಮತಕ್ಷೇತ್ರದ 40ಕ್ಕೂ ಅಧಿಕ ಗ್ರಾಮಗಳು ಒಳಪಡುತ್ತವೆ. ಸದ್ಯ ಬೇಸಿಗೆ ಇರುವುದರಿಂದ ಈ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ

ಕನ್ನಡಪ್ರಭ ವಾರ್ತೆ ತಾಳಿಕೋಟೆ

ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ತಾಳಿಕೋಟೆ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದ ಹಾಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿಗೆ ಸಂಬಂಧಿಸಿದ ದೇವರ ಹಿಪ್ಪರಗಿ ಮತಕ್ಷೇತ್ರದ 40ಕ್ಕೂ ಅಧಿಕ ಗ್ರಾಮಗಳು ಒಳಪಡುತ್ತವೆ. ಸದ್ಯ ಬೇಸಿಗೆ ಇರುವುದರಿಂದ ಈ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ ವಹಿಸಬೇಕು. ತಾಲೂಕಿನ ಗ್ರಾಮಗಳಾದ ಗಡಿ ಸೋಮನಾಳ, ತುಂಬಗಿ, ಲಕ್ಕುಂಡಿ, ಬ್ಯಾಲ್ಯಾಳ, ಕಲಕೇರಿ, ಒಳಗೊಂಡು ೭ ರಿಂದ ೮ ಗ್ರಾಮಗಳಲ್ಲಿ ನೀರಿನ ಮೂಲವಿದ್ದರೂ ಕೆಲವೆಡೆ ಬೋರ್‌ವೆಲ್ ಮೋಟರ್‌ಗಳು ಸುಟ್ಟ ಬಗ್ಗೆ ಮಾಹಿತಿ ಇದೆ. ಅವುಗಳನ್ನು ಬದಲಾಯಿಸಿ ನೀರು ಒದಗಿಸಬೇಕು ಎಂದು ತಾಪಂ ಇಒ ನಿಂಗಪ್ಪ ಮಸಳಿಗೆ ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಂದರ್ಭ ಬಂದರೆ ಈಗಾಗಲೇ ಗ್ರಾಪಂನ ೧೫ ಹಣಕಾಸು ಯೋಜನೆಗೆ ಸಂಬಂಧಿಸಿದ ಎಲ್ಲ ಗ್ರಾಪಂಗಳಿಗೆ ಹಣ ಬಿಡುಗಡೆಯಾಗಿದೆ. ಆ ಹಣವನ್ನು ಬಳಕೆ ಮಾಡಿಕೊಂಡು ಹೊಸ ಬೋರ್‌ವೆಲ್‌ಗಳನ್ನು ಕೊರೆಸಿ ಅಥವಾ ಅವಶ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬೇಸಿಗೆ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕವನ್ನು ಹೆಚ್ಚಿಗೆ ಕಡಿತಗೊಳಿಸದೇ ನಿಗದಿ ಪಡಿಸಿದ ಸಮಯಕ್ಕೆ ತಕ್ಕಂತೆ ವಿದ್ಯುತ್ ಪೂರೈಕೆಗೆ ಹೆಸ್ಕಾ ಅಭಿಯಂತರರಿಗೆ ಸೂಚಿಸಿದರು. ಗ್ರಾಮಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ಗಳಿಗೆ ನೀರು ತುಂಬಿಕೊಳ್ಳಲು ಅಧಿಕಾರಿಗಳು ಗ್ರಾಪಂ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಜನರಿಗೆ ಕುಡಿಯುವ ನೀರಿನ ತೊಂದರೆ ಬಾರದಂತೆ ಏಚ್ಚರವಹಿಸುವಂತೆ ತಿಳಿಸಿದರು.

ತಾಳಿಕೋಟೆ ತಾಲೂಕಿನ ಕೆಲವು ಗ್ರಾಪಂ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಬಂದಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ ಮತ್ತು ಕೂಡಲೇ ಬೆಳೆ ಮತ್ತು ಪರಿಹಾರದ ಮಾರ್ಗೋಪಾಯಕ್ಕೆ ಸರ್ಕಾರಕ್ಕೆ ವರಧಿ ಸಲ್ಲಿಸಲು ಸೂಚಿಸಿದ್ದೇನೆ. ಅದರಂತೆ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ತಹಸೀಲ್ದಾರ್‌ರು ತಾಲೂಕಿನ ಭಂಟನೂರ, ಕೊಡಗಾನೂರ, ತುಂಬಗಿ, ಬೆಕಿನಾಳ, ಕಲಕೇರಿ, ಬ.ಸಾಲವಾಡಗಿ, ಒಳಗೊಂಡು ಇನ್ನಿತರ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆ ಹಾನಿಗೆ ಸಂಬಂಧಿಸಿ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಕೂಡಲೇ ಸಲ್ಲಿಸಿ ರೈತರ ವಿಷಯದಲ್ಲಿ ನಿರ್ಲಕ್ಷ ತೋರಬೇಡಿ ಎಂದರು. ಅಲ್ಲದೇ, ಬೆಳೆ ಹಾನಿಯ ನೈಜ ಚಿತ್ರಣದ ವರದಿಯನ್ನು ಕಳಿಸುವಂತೆ ಶಾಸಕ ರಾಜುಗೌಡ ಪಾಟೀಲ ಅವರು ತಹಸೀಲ್ದಾರ್‌ ಡಾ.ವಿನಯಾ ಹೂಗಾರ ಹಾಗೂ ಕೃಷಿ ಅಧಿಕಾರಿ ಮಹೇಶ ಜೋಶಿ ಅವರಿಗೆ ಸೂಚಿಸಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ ಕಾಲೇಜುಗಳ ಕಟ್ಟಡಗಳ ಸ್ಥಿತಿಗಳನ್ನು ಅವಲೋಕಿಸಬೇಕು. ಸದ್ಯ ಶಾಲೆಗಳಿಗೆ ರಜೆ ಇರುವದರಿಂದ ಎರಡು ತಿಂಗಳಲ್ಲಿ ಕಟ್ಟಡಗಳು ದುರಸ್ಥಿಗೆ ಬಂದಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಿ. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ತಿಳಿಸಿ, ಅಗತ್ಯ ಬಿದ್ದರೆ ಬೋರ್‌ವೆಲ್‌ ಕೊರೆಸೋಣ. ಸರ್ಕಾರಿಯ ಶಾಲೆಗಳು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲು ನನ್ನ ಅನುದಾನದಲ್ಲಿ ಅವಶ್ಯವಿರುವ ಹಣ ಬಿಡುಗಡೆ ಮಾಡುತ್ತೇನೆ. ಶೈಕ್ಷಣಿಕ ವರ್ಷ ಪ್ರಾರಂಭಕ್ಕು ಮುನ್ನ ಶಾಲೆಗಳ ಕಟ್ಟಡಗಳು ಸುಂದರವಾಗಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಅವರಿಗೆ ನಿರ್ದೇಶನ ನೀಡಿದರು.

ಈ ಸಮಯದಲ್ಲಿ ತಹಸೀಲ್ದಾರ್‌ ಡಾ.ವಿನಯಾ ಹೂಗಾರ, ಕೃಷಿ ಅಧಿಕಾರಿ ಮಹೇಶ ಜೋಶಿ, ಆರ್‌ಡಬ್ಲುಎಸ್ ಅಧಿಕಾರಿ ಹಿರೇಗೌಡರ, ಪಿಎಸ್‌ಐ ಆರ್.ಎಸ್.ಭಂಗಿ, ಮುಖಂಡರಾದ ಎಚ್.ಎಸ್.ಪಾಟೀಲ(ಅಸ್ಕಿ), ಮಡು ಸಾಹುಕಾರ ಬಿರಾದಾರ, ಬಸನಗೌಡ ಮಾಡಗಿ, ಬಸನಗೌಡ ವಣಕ್ಯಾಳ, ಎಂ.ಎಂ.ಪಾಟೀಲ, ವಿರೇಶಗೌಡ ಪಾಟೀಲ, ವಿಶ್ವನಾಥ ನಾಡಗೌಡ, ರಾಜುಗೌಡ ಕೊಳೂರ, ಗುರುಪ್ರಸಾದ ಬಿಜಿ, ಮೊದಲಾದವರು ಉಪಸ್ಥಿತರಿದ್ದರು.

---

ಕೋಟ್‌

ಬೆಳೆ ಹಾನಿಗೆ ಸಂಬಂಧಿಸಿ ದೇವರ ಹಿಪ್ಪರಗಿ ಮತಕ್ಷೇತ್ರದ ಕೆಲವು ಗ್ರಾಪಂ ವ್ಯಾಪ್ತಿಗಳ ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರ ಇದುವರೆಗೂ ಬಂದಿಲ್ಲ. ಕೂಡಲೇ ನೈಜ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಅದರಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಬೆಳೆ ಹಾನಿಯ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ನಾನು ರೈತನ ಮಗ. ರೈತರಿಗೆ ಅನ್ಯಾಯವಾಗಲು ಬಿಡಲ್ಲ.

ರಾಜುಗೌಡ ಪಾಟೀಲ (ಕು.ಸಾಲವಾಡಗಿ), ಶಾಸಕ

Share this article