ಅಳ್ನಾವರ: ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಂಗ್ರಹ, ವಿದ್ಯುತ್ ಸರಬರಾಜು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾಲೂಕು ನೊಡಲ್ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರ ಅಧ್ಯಕ್ಷತೆಯಲ್ಲಿ ಅಳ್ನಾವರ ತಾಲೂಕು ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ಸಭೆ ನಡೆಯಿತು.
ವಿವಿಧ ಇಲಾಖೆಗಳವಾರು ಮಾಹಿತಿ ಪಡೆದುಕೊಂಡ ಈಶ್ವರ ಉಳ್ಳಾಗಡ್ಡಿ ಅವರು, ಸಭೆಗೆ ಗೈರಾದವರಿಗೆ ನೋಟಿಸ್ ನೀಡಲು ತಹಸೀಲ್ದಾರರಿಗೆ ಸೂಚಿಸಿದರು.ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿಟ್ಟುಕೊಂಡು ಅಗತ್ಯವೆನಿಸಿದರೆ ಬಾಡಿಗೆಯಿಂದ ಪಡೆದುಕೊಳ್ಳಲು ಮುಂಜಾಗ್ರತಾ ವ್ಯವಸ್ಥೆಗಳನ್ನು ಮಾಡಿಟ್ಟುಕೊಳ್ಳುವಂತೆ ಪಿಡಿಒ ಅವರಿಗೆ ಉಳ್ಳಾಗಡ್ಡಿ ಸೂಚಿಸಿದರು.
ತಾಲೂಕಿನಲ್ಲಿ 9 ಸಾವಿರಕ್ಕೂ ಅಧಿಕ ಜಾನುವಾರುಗಳಿದ್ದು, ಮೇವಿನ ಕೊರತೆ ಇಲ್ಲ, ನೀರಿನ ಲಭ್ಯತೆಯೂ ಇದೆ ಎಂದು ಪಶು ಸಂಗೋಪನಾ ಇಲಾಖೆಯವರು ಮಾಹಿತಿ ಒದಗಿಸಿದರು.ಕಡಬಗಟ್ಟಿ ಗ್ರಾಮದಲ್ಲಿ ಕಂಡು ಬರುತ್ತಿರುವ ನೀರಿನ ಸಮಸ್ಯೆ ನೀಗಿಸಲು ಹೊಸದಾಗಿ ಕೊರೆದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡಲು ಟ್ರಾನ್ಸಫಾರ್ಮರ್ ಅವಶ್ಯಕತೆ ಇದ್ದ ಬಗ್ಗೆ ಪಿಡಿಒ ಆನಂದ ಪಾಟೀಲ ಹೇಳಿದರು.
ತಾಲೂಕಿನಲ್ಲಿ ಯಾವುದೆ ಇಲಾಖೆಯಲ್ಲಿಯೂ ಸಾರ್ವಜನಿಕರನ್ನು ಅಲೆದಾಡಿಸದೆ ಸಕಾಲದಲ್ಲಿ ಕೆಲಸ ಮಾಡಿಕೊಡಬೇಕು ಮತ್ತು ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸದಾ ಕಾರ್ಯಸಿದ್ಧವಾಗಿರುವಂತೆ ಆಯಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ ನೋಡಲ್ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರು, ಯಾವುದೇ ಇಲಾಖೆಯ ಬಗ್ಗೆ ಜನರಿಂದ ದೂರಗಳು ಬಂದರೆ ಇಲಾಖೆಯ ಮುಖ್ಯಸ್ಥರೆ ಹೊಣೆಗಾರರೆಂದು ಎಚ್ಚರಿಸಿದರು.ಸಭೆಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು, ಯಾರೊಬ್ಬರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾತನಾಡಿ, ತಾಲೂಕಿನಲ್ಲಿ ಕೆಲಸಗಳನ್ನು ಬಾಕಿ ಇಟ್ಟುಕೊಳ್ಳದೆ ನಿರ್ದಿಷ್ಟ ಅವಧಿಯೊಳಗೆ ಮುಗಿಸಲು ಸೂಚಿಸಿದರು.
ತಾಪಂ ಇಒ ಪ್ರಶಾಂತ ತುರಕಾಣಿ, ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಆರ್.ಎಸ್. ರೂಗಿ, ನೀರಾವರಿ ಇಲಾಖೆಯ ರವಿಚಂದ್ರ ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ. ತನುಜಾ, ಪಪಂ ಮುಖ್ಯಾಧಿಕಾರಿ ಪ್ರಕಾಶ ಮಗದುಮ್ ಹಾಗೂ ಇತರ ಇಲಾಖಾ ಅಧಿಕಾರಿಗಳು ಹಾಜರಿದ್ದರು.ಸಭೆಯ ಆನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಈಶ್ವರ ಉಳ್ಳಾಗಡ್ಡಿ ಅವರು ಅಲ್ಲಿನ ವ್ಯವಸ್ಥೆ ಪರಿಶೀಲಿಸಿ, ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ರೋಗಿಗಳಿಗೆ ನೀಡುವ ಸೇವೆಯಲ್ಲಿ ನ್ಯೂನತೆ ಕಂಡು ಬರದಂತೆ ನೋಡಿಕೊಳ್ಳಲು ವೈದ್ಯರಿಗೆ ಸೂಚಿಸಿದರು. ತಹಸೀಲ್ದಾರ್ ಬೆಣ್ಣೆಶಿರೂರ, ಪ್ರಶಾಂತ ತುರಕಾಣಿ, ಡಾ. ತನುಜಾ ಇದ್ದರು.