ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಬಸವ ಸಂಸ್ಕೃತಿ ಅಭಿಯಾನ ಭಾಗವಾಗಿ ಬುಧವಾರ ನವನಗರದ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ವಚನ ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಬಸವಣ್ಣ, ಲಿಂಗಾಯತ ಎಂದೆಲ್ಲ ಹೇಳುತ್ತೇವೆ. ಆದರೆ ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಸೇರಿಸುವ ಬಗ್ಗೆ ಯಾಕೆ ಯಾರೂ ಧ್ವನಿ ಎತ್ತುತ್ತಿಲ್ಲ ಎಂಬ ಮುಧೋಳದ ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಸ್ವಾಮೀಜಿಗಳು ಸತತ ಪ್ರಯತ್ನ ಮಾಡುತ್ತಿದ್ದೇವೆ. ಜನಗಣತಿ ಸಂದರ್ಭದಲ್ಲಿ ಲಿಂಗಾಯತ ಎಂದೇ ಬರೆಯಿಸಿ ಅದಕ್ಕೆ ಜಾತಿ, ಉಪಜಾತಿ ಬೇಡ. ಪ್ರತಿಯೊಬ್ಬರು ಗಟ್ಟಿಯಾಗಿ ಇದನ್ನು ಮಾಡಿದಾಗ ಸ್ವತಂತ್ರ ಧರ್ಮದ ಮಾನ್ಯತೆ ಸಿಗುತ್ತದೆ. ಮುಂದೆ ಸೌಲಭ್ಯ ಪಡೆಯುವುದಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು.ವೀರಶೈವಕ್ಕೆ ನಮ್ಮ ವಿರೋಧವಿಲ್ಲ. ಲಿಂಗಾಯತ ಎಂದು ಬರೆಯಿಸಿ ಮುಂದೆ ಉಪಪಂಗಡದಲ್ಲಿ ವೀರಶೈವ ಎಂದು ಬರೆಯಬಹುದು ಎಂದು ಹೇಳಿದರು.
ಇದಕ್ಕೆ ಭಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು, ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಬಾಗಲಕೋಟೆಯ ಚರಂತಿಮಠದ ಡಾ.ಪ್ರಭುಸ್ವಾಮೀಜಿ, ಇಳಕಲ್ಲಿನ ಶ್ರೀಗುರುಮಹಾಂತ ಸ್ವಾಮೀಜಿ ಉತ್ತರಿಸಿದರು.
ಡಾ.ಪ್ರಭುಸ್ವಾಮೀಜಿ ಮಾತನಾಡಿ, ಸವದತ್ತಿಯಲ್ಲಿ ದೇವದಾಸಿ ಮಹಿಳೆಯರು ಬಳೆ ಒಡೆದುಕೊಳ್ಳುವ ಸಂಪ್ರದಾಯವಿತ್ತು. ಸರ್ಕಾರದ ವಿವಿಧ ಇಲಾಖೆಗಳು ಕೋರಿದಾಗ ಅವರನ್ನು ಸೇರಿಸಿ ಆ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲಾಯಿತು. ಬಳೆ ತೊಡುವಂತೆ ಮನವರಿಕೆ ಮಾಡಿಕೊಡಲಾಯಿತು. ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ವಿಧವೆಯ ಮದುವೆ ಮಾಡಿಸಲಾಗಿತ್ತು. ಮಹಿಳೆಯರು ಬದಲಾದರೆ ಅನೇಕ ಮೂಢನಂಬಿಕೆಗಳನ್ನು ದೂರಗೊಳಿಸಬಹುದು ಎಂದು ಹೇಳಿದರು.
ಮೂರ್ತಿ ಪೂಜೆ ಕುರಿತು ಗೊಂದಲ: ಗೌರಮ್ಮ ಪೂಜಾರ ಎಂಬುವವರು ಗಣೇಶನನ್ನು ಕೂರಿಸಿ ಪೂಜಿಸುತ್ತಾರೆ. ಏಕತತ್ವ ನಿಷ್ಠೆ ಉಳ್ಳುವರು ಹೀಗೆ ಮಾಡಬಹುದೇ ಅದರ ಬದಲಾಗಿ ಬಸವಣ್ಣನನ್ನು ಕೂರಿಸಿ ಪೂಜಿಸಬಹುದೇ ಎಂದು ಕೇಳಿದರು. ಇದಕ್ಕೆ ಮಠಾಧೀಶರ ಉತ್ತರ ಗೊಂದಲಮಯವಾಗಿತ್ತು. ಮುಖಂಡ ಅಶೋಕ ಬರಗುಂಡಿ ಮಾತನಾಡಿ, ನಾವು ನಿರಾಕಾರ ಸ್ವರೂಪಿ ಒಪ್ಪಿದ್ದೇವೆ. ಮೂರ್ತಿ ಪೂಜಕರು ನಾವಲ್ಲ ಎಂದರು. ಭಾಲ್ಕಿ ಶ್ರೀಗಳು ಉತ್ತರಿಸಿ ಎಲ್ಲ ಧರ್ಮಕ್ಕೆ ಗುರುವಿದ್ದಂತೆ ಬಸವಣ್ಣ ನಮ್ಮ ಧರ್ಮಗುರು. ಬಸವಣ್ಣನನ್ನು ಕೂರಿಸಿ ಪುಷ್ಪಾರ್ಚನೆ ಮಾಡುವುದು ತಪ್ಪಲ್ಲ ಎಂದರು. ಇದು ಗೊಂದಲಕ್ಕೆ ಕಾರಣವಾಯಿತು.