ಕಡಿಮೆ ಮೊತ್ತ ನಮೂದಿಸಿ ಗುತ್ತಿಗೆದಾರರ ದೂರ ಇರಿಸಿ:ಎನ್ನಾರ್‌ ರಮೇಶ್‌ ಮನವಿ

KannadaprabhaNewsNetwork | Published : Feb 4, 2024 1:34 AM

ಸಾರಾಂಶ

ಉದ್ಯಾನಗಳ ನಿರ್ವಹಣೆ ಕಾರ್ಯದ ಟೆಂಟರ್‌ ಪ್ರಕ್ರಿಯೆಯಲ್ಲಿ ಕಡಿಮೆ ಮೊತ್ತ ನಮೂದಿಸಿದ ವಂಚಕ ಗುತ್ತಿಗೆದಾರರನ್ನು ಟೆಂಡರ್‌ ಪ್ರಕ್ರಿಯೆಯಿಂದ ದೂರು ಇರಿಸಲು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಬಿಬಿಎಂಪಿಗೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉದ್ಯಾನಗಳ ನಿರ್ವಹಣೆ ಕಾರ್ಯದ ಟೆಂಟರ್‌ ಪ್ರಕ್ರಿಯೆಯಲ್ಲಿ ಶೇ.40-45ರಷ್ಟು ಕಡಿಮೆ ಮೊತ್ತವನ್ನು ನಮೂದಿಸಿರುವ ವಂಚಕ ಗುತ್ತಿಗೆದಾರರನ್ನು ಟೆಂಡರ್‌ ಪ್ರಕ್ರಿಯೆಯಿಂದ ದೂರು ಇರಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಗೆ ಮನವಿ ಮಾಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಇರುವ 1,270 ಉದ್ಯಾನಗಳನ್ನು ನಿರ್ವಹಣೆ ಮಾಡುವ ಸಂಬಂಧದ ಟೆಂಡರ್ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಪಾಲಿಕೆಯ 8 ವಲಯಗಳ ಪೈಕಿ ಪ್ರಸ್ತುತ ದಾಸರಹಳ್ಳಿ ವಲಯದ ಟೆಂಡರ್ ಪ್ರಕ್ರಿಯೆಯ ತಾಂತ್ರಿಕ ಬಿಡ್ ಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ ಕ್ರಮ ಸಂಖ್ಯೆ 4, 5, 6 ಹಾಗೂ 8 ರಲ್ಲಿ ಕ್ರಮವಾಗಿ ಶಿವಣ್ಣ ಮತ್ತು ರವಿ ಪ್ರಕಾಶ್ (ಕಿರಣ್ ನರ್ಸರಿ ಮತ್ತು ಸುರೇಶ್ ನರ್ಸರಿ) ಹೆಸರಿನಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ನಿಗದಿತ ಅಂದಾಜು ಮೊತ್ತಕ್ಕಿಂತಲೂ ಶೇ.42ರಿಂದ ಶೇ.45 ರಷ್ಟು ಕಡಿಮೆ ಮೊತ್ತವನ್ನು ನಮೂದಿಸಿದ್ದಾರೆ.

ಈ ಹಿಂದೆ ಇದೇ ಶಿವಣ್ಣ ಮತ್ತು ರವಿ ಪ್ರಕಾಶ್ ಮಹದೇವಪುರ ವಲಯ, ದಕ್ಷಿಣ ವಲಯ, ದಾಸರಹಳ್ಳಿ ವಲಯ, ಯಲಹಂಕ ವಲಯಗಳಲ್ಲಿ ಇದೇ ರೀತಿ ಶೇ.35 ಕ್ಕಿಂತಲೂ ಕಡಿಮೆ ಮೊತ್ತವನ್ನು ನಮೂದಿಸಿ ಉದ್ಯಾನವನಗಳ ನಿರ್ವಹಣೆಯನ್ನು ಮಾಡದೆಯೇ ಹಣವನ್ನು ಪಡೆದು ಪಾಲಿಕೆಗೆ ಕೋಟ್ಯಂತರ ರು. ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಗದಿತ ಮೊತ್ತಕ್ಕಿಂತಲೂ ಶೇ.40 ರಿಂದ 45ರಷ್ಟು ಕಡಿಮೆ ಮೊತ್ತವನ್ನು ನಮೂದಿಸುವ ಗುತ್ತಿಗೆದಾರರು ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಸಾಧ್ಯವೇ ಇರುವುದಿಲ್ಲ. ಕೋಟ್ಯಂತರ ರು. ವೆಚ್ಚ ಮಾಡಿ ನಿರ್ಮಿಸಿರುವ ಉದ್ಯಾನಗಳು ಇಂತಹ ಗುತ್ತಿಗೆದಾರರಿಂದ ಹಾಳಾಗುತ್ತಿವೆ. ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ನಿಗದಿತ ವೇತನಕ್ಕಿಂತಲೂ ಶೇ.50 ರಿಂದ 60 ರಷ್ಟು ಕಡಿಮೆ ಮೊತ್ತವನ್ನು ನೀಡುತ್ತಾ ಆ ಕಾರ್ಮಿಕರಿಗೂ ಸಹ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಅತ್ಯುತ್ತಮವಾಗಿ ನಿರ್ಮಿಸಲಾದ ಉದ್ಯಾನವನಗಳು ಇಂತಹ ವಂಚಕ ಗುತ್ತಿಗೆದಾರರಿಂದ ಕೆಲವೇ ತಿಂಗಳಲ್ಲಿ ಸಂಪೂರ್ಣವಾಗಿ ಹಾಳಾಗಿ ಹೋಗುವ ಅವಕಾಶಗಳೇ ಹೆಚ್ಚಿರುತ್ತದೆ. ಹೀಗಾಗಿ ಶೇ.30ಕ್ಕಿಂತಲೂ ಹೆಚ್ಚು-ಕಡಿಮೆ ಮೊತ್ತವನ್ನು ನಮೂದಿಸಿರುವ ಗುತ್ತಿಗೆದಾರರಿಗೆ ಉದ್ಯಾನವನಗಳ ನಿರ್ವಹಣೆ ಕಾರ್ಯದ ಗುತ್ತಿಗೆಯನ್ನು ನೀಡಬಾರದು. ಗುತ್ತಿಗೆದಾರರಾದ ಶಿವಣ್ಣ ಮತ್ತು ರವಿ ಪ್ರಕಾಶ್ ಕಳೆದ ಹತ್ತಾರು ವರ್ಷಗಳಿಂದ ನಿರ್ವಹಿಸಿರುವ ಉದ್ಯಾನವನಗಳ ಸ್ಥಿತಿಗತಿಗಳನ್ನು ಗಮನಿಸಿ ಮತ್ತು ಅಂತಹ ಉದ್ಯಾನವನಗಳ ಅಭಿವೃದ್ಧಿಗಾಗಿ ಪುನರಾವರ್ತನೆಯಾಗಿ ಪಾಲಿಕೆಯು ವೆಚ್ಚ ಮಾಡಿರುವ ಹಣವನ್ನು ಈ ಇಬ್ಬರು ಗುತ್ತಿಗೆದಾರರಿಂದ ಸಂಗ್ರಹಿಸಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.

Share this article