ತುಂಗಭದ್ರಾ ಜಲಾಶಯಕ್ಕೆ ಆಗಮಿಸಿದ ಕ್ರಸ್ಟ್‌ ಗೇಟ್‌ ಎಲಿಮೆಂಟ್‌ : ಉತ್ಸಾಹದ ವಾತಾವರಣ

KannadaprabhaNewsNetwork | Updated : Aug 16 2024, 08:27 AM IST

ಸಾರಾಂಶ

ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ನಂ.19ಕ್ಕೆ ಅಳವಡಿಸಲಾಗುವ ಸ್ಟಾಪ್‌ ಲಾಗ್‌ ಗೇಟ್‌ನ ಮೊದಲ ಎಲಿಮೆಂಟ್ ಜಿಂದಾಲ್‌ನಿಂದ ಆಗಮಿಸಿದೆ. ಈ 13 ಟನ್‌ ತೂಕದ ಎಲಿಮೆಂಟ್‌ ಅನ್ನು ಪೊಲೀಸ್ ಭದ್ರತೆಯಲ್ಲಿ ಜಲಾಶಯಕ್ಕೆ ತರಲಾಯಿತು, ಇದು ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಉತ್ಸಾಹ ತಂದಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ನಂ.19ಕ್ಕೆ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಸಲು ಜಿಂದಾಲ್‌ನಲ್ಲಿ ತಯಾರಿಸಲಾದ ಎಲಿಮೆಂಟ್‌ (ಪೀಸ್‌) ಸಿದ್ಧಗೊಂಡು ಜಲಾಶಯಕ್ಕೆ ಆಗಮಿಸಿದ್ದು, ಈ ವೇಳೆ ಜಲಾಶಯದಲ್ಲಿ ಉತ್ಸಾಹ ಗರಿಗೆದರಿತ್ತು.

ಜಿಂದಾಲ್‌ನಲ್ಲಿ ಐದು ಅಡಿ ಎತ್ತರ ಹಾಗೂ 60 ಅಡಿ ಅಗಲದ 13 ಟನ್‌ ಸಾಮರ್ಥ್ಯದ ಎಲಿಮೆಂಟ್ ತಯಾರಿಸಲಾಗಿದೆ. ಪರಿಣತ ತಜ್ಞ ಕನ್ನಯ್ಯ ನಾಯ್ಡು ನೀಡಿದ ಡಿಸೈನ್‌ ಆಧಾರದ ಮೇಲೆ ಈ ಎಲಿಮೆಂಟ್‌ ತಯಾರಿಸಲಾಗಿದ್ದು, ಸ್ಟಾಪ್‌ ಲಾಗ್ ಗೇಟ್‌ ಅಳವಡಿಕೆಗೆ ಈ ಪೀಸ್‌ ಭದ್ರ ಬುನಾದಿ ಆಗಲಿದೆ. ಈ ಎಲಿಮೆಂಟ್‌ ಬಳಿಕ ಮತ್ತೆ ನಾಲ್ಕು ಎಲಿಮೆಂಟ್‌ ಜೋಡಿಸಲಾಗುತ್ತದೆ. ಆಗ ಈ ಸ್ಟಾಪ್‌ ಲಾಗ್‌ ಗೇಟ್‌ನ ಒಟ್ಟು ತೂಕ 65 ಟನ್‌ ಆಗಲಿದೆ.

ಪೊಲೀಸ್ ಭದ್ರತೆಯಲ್ಲಿ ಎಲಿಮೆಂಟ್‌: ಬಳ್ಳಾರಿ ಜಿಲ್ಲೆಯ ತೋರಣಗಲ್‌ನ ಜಿಂದಾಲ್‌ನಿಂದ ಪೊಲೀಸ್‌ ಭದ್ರತೆಯಲ್ಲಿ ತರಲಾಯಿತು. ಜಿಂದಾಲ್‌ನಿಂದ ಬೆಳಗ್ಗೆ 7:11 ನಿಮಿಷಕ್ಕೆ ಹೊರಟ 18 ಗಾಲಿಯ ಘನ ಲಾರಿ 13 ಟನ್‌ನ ಎಲಿಮೆಂಟ್‌ಅನ್ನು ಹೊತ್ತು ತಂದಿತು. ಈ ಎಲಿಮೆಂಟ್‌ ಜಲಾಶಯಕ್ಕೆ ಬೆಳಗ್ಗೆ 8:50ಕ್ಕೆ ಆಗಮಿಸಿತು.

ರೂಟ್‌ ಬದಲಾವಣೆ: ರಾ.ಹೆ.63ರ ಬೈಪಾಸ್‌ ಮೂಲಕ ತರಲಾದ ಎಲಿಮೆಂಟ್ ಹೆದ್ದಾರಿ-50ರ ಮೂಲಕ ಜಲಾಶಯ ಪ್ರವೇಶಿಸಬೇಕಿತ್ತು. ಆದರೆ, ಭಾರೀ ಗಾತ್ರದ ಲಾರಿಗೆ ತಿರುವು ಪಡೆಯಲು ಸಮಸ್ಯೆ ಆಗಲಿದೆ ಎಂದು ಎಸ್ಪಿ ಶ್ರೀಹರಿಬಾಬು ಸೂಚನೆ ನೀಡಿದ್ದರಿಂದ ಮತ್ತೆ ಸಂಚಾರ ಠಾಣೆಯಿಂದ ಸಾಯಿ ಬಾಬಾ ವೃತ್ತದ ಮೂಲಕ ತುಂಗಭದ್ರಾ ಡ್ಯಾಂಗೆ ತರಲಾಯಿತು.

ಗರಿಗೆದರಿದ ಉತ್ಸಾಹ: ತುಂಗಭದ್ರಾ ಜಲಾಶಯಕ್ಕೆ ಈ ಎಲಿಮೆಂಟ್‌ ಬರುತ್ತಿದ್ದಂತೆಯೇ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಓಆರ್‌ಕೆ ರೆಡ್ಡಿ ಹಾಗೂ ಪರಿಣತ ತಜ್ಞ ಕನ್ನಯ್ಯ ನಾಯ್ಡು ಆಗಮಿಸಿ ಪರಿಶೀಲಿಸಿದರು. ಇನ್ನು ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಮಂಡಳಿ ಅಧಿಕಾರಿಗಳಲ್ಲಿ ಉತ್ಸಾಹ ಮನೆ ಮಾಡಿತ್ತು.

ಜಲಾಶಯದಲ್ಲಿ ಎಲಿಮೆಂಟ್ ಬರುತ್ತಿದ್ದಂತೆಯೇ ಪರಿಶೀಲನೆ ನಡೆಸಲಾಯಿತು. ಈ ಪೀಸ್‌ನ ತೂಕದ ಬಗ್ಗೆಯೂ ಮಂಡಳಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು.

ರಾಹುಕಾಲದೊಳಗೆ ಪ್ರವೇಶ: ಜಲಾಶಯದೊಳಗೆ ಆಗಮಿಸಿದ ಎಲಿಮೆಂಟ್‌ನ್ನು ಡ್ಯಾಂನ ಬಳಿ ರಾಹುಕಾಲ ಪ್ರಾರಂಭದೊಳಗೆ ಕೊಂಡೊಯ್ಯಲಾಯಿತು. ಘನ ಲಾರಿಯಿಂದ ಕ್ರೇನ್‌ ಬಳಸಿ ವೈಜ್ಞಾನಿಕ ತಳಹದಿ ಮೇಲೆ ಎಲಿಮೆಂಟ್‌ ಇಳಿಸಲಾಯಿತು. ಬಳಿಕ ಲಾರಿ ಮರಳಿತು.

ಸ್ವಲ್ಪ ಉದ್ದ ಆದ ಎಲಿಮೆಂಟ್‌: ಜಿಂದಾಲ್‌ನಿಂದ ತರಲಾದ ಎಲಿಮೆಂಟ್‌ ಸ್ವಲ್ಪ ಉದ್ದ ಆದ ಹಿನ್ನೆಲೆಯಲ್ಲಿ ಪರಿಣತ ತಜ್ಞ ಕನ್ನಯ್ಯ ನಾಯ್ಡು ಪರಿಶೀಲಿಸಿದರು. ಬಳಿಕ ಇದನ್ನು ಕಟ್‌ ಮಾಡುವ ಕಾರ್ಯವೂ ನಡೆದಿದೆ. ಇದು ಕೂಡ ಕಾರ್ಯಾಚರಣೆ ಸ್ಥಗಿತಗೊಳ್ಳಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಏಳು ಎಲಿಮೆಂಟ್‌ ಸಿದ್ಧ: ಜಿಂದಾಲ್‌ನಲ್ಲಿ ಮತ್ತೆ ಎರಡು ಎಲಿಮೆಂಟ್‌, ಹೊಸಪೇಟೆಯ ನಾರಾಯಣ ಎಂಜಿನಿಯರ್ಸ್‌ನಲ್ಲಿ ಮೂರು ಎಲಿಮೆಂಟ್‌, ಹೊಸಹಳ್ಳಿಯ ಹಿಂದೂಸ್ತಾನ ಎಂಜಿನಿಯರ್ಸ್‌ನಲ್ಲಿ ಮೂರು ಎಲಿಮೆಂಟ್‌ ಸಿದ್ಧಗೊಂಡಿವೆ. ಈಗ ಮೊದಲಿಗೆ ಮೂರು ಎಲಿಮೆಂಟ್‌ ಜೋಡಿಸಲಾಗುತ್ತದೆ. ಬಳಿಕ ಮತ್ತೆ ಎರಡು ಎಲಿಮೆಂಟ್‌ ಜೋಡಿಸಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಸಲಾಗುತ್ತದೆ. ಹೆಚ್ಚುವರಿಯಾಗಿ ಮೂರು ಎಲಿಮೆಂಟ್‌ ಸಿದ್ಧಪಡಿಸಲಾಗಿದೆ.

ನಾವು ಜಿಂದಾಲ್‌ನಿಂದ ಈ ಎಲಿಮೆಂಟ್‌ ತಂದಿದ್ದೇವೆ. ನಮಗೆ ಪೊಲೀಸ್‌ ಭದ್ರತೆಯಲ್ಲಿ ಈ ರೀತಿ ಎಲಿಮೆಂಟ್‌ ಸಾಗಾಟ ಮಾಡಿದ್ದು, ಇದೇ ಮೊದಲ ಅನುಭವ. ಇಂತಹ ಮಹತ್‌ ಕಾರ್ಯದಲ್ಲಿ ನಾನು ಕೂಡ ಅಳಿಲು ಸೇವೆ ಸಲ್ಲಿಸಿರುವೆ ಎನ್ನುತ್ತಾರೆ ಎಲಿಮೆಂಟ್ ತಂದ ಘನ ಲಾರಿ ಚಾಲಕ ಚೋಟು ಜಾಧವ್‌.

Share this article