ಆ.3ರಂದು ಸಂಕಲ್ಪ-2 ಸ್ಪರ್ಧಾತ್ಮಕ ತರಬೇತಿಗೆ ಪ್ರವೇಶ ಪರೀಕ್ಷೆ

KannadaprabhaNewsNetwork |  
Published : Jul 27, 2026, 01:30 AM IST
26ಕೆಡಿವಿಜಿ5, 6-ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಂಕಲ್ಪ-2 ಯೋಜನೆ ಕುರಿತಂತೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ಎಸ್‌.ಎಸ್‌. ಕೇರ್ ಟ್ರಸ್ಟ್, ದಾವಣಗೆರೆ ವಿ.ವಿ. ಹಾಗೂ ಬೆಂಗಳೂರಿನ ಐಎಎಸ್ ಬಾಬಾ ಸಹಯೋಗದಲ್ಲಿ ಸಂಕಲ್ಪ-2 ಯೋಜನೆಯಡಿ ದಾವಣಗೆರೆಯ ಸಂಕಲ್ಪ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಂಸದೆ, ಎಸ್‌.ಎಸ್‌. ಕೇರ್ ಟ್ರಸ್ಟ್ ಮುಖ್ಯಸ್ಥೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

- ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಇಎಗೂ ಸಂಕಲ್ಪ-2ನಡಿ ತರಬೇತಿಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ: ಡಾ.ಪ್ರಭಾ ಮಾಹಿತಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಎಸ್‌.ಎಸ್‌. ಕೇರ್ ಟ್ರಸ್ಟ್, ದಾವಣಗೆರೆ ವಿ.ವಿ. ಹಾಗೂ ಬೆಂಗಳೂರಿನ ಐಎಎಸ್ ಬಾಬಾ ಸಹಯೋಗದಲ್ಲಿ ಸಂಕಲ್ಪ-2 ಯೋಜನೆಯಡಿ ದಾವಣಗೆರೆಯ ಸಂಕಲ್ಪ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಂಸದೆ, ಎಸ್‌.ಎಸ್‌. ಕೇರ್ ಟ್ರಸ್ಟ್ ಮುಖ್ಯಸ್ಥೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ನಗರದ ಸಂಕಲ್ಪ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಜು.26ರಿಂದ 31ರವರೆಗೆ ಗೂಗಲ್ ಫಾರಂ ನೋಂದಣಿಗೆ ಅವಕಾಶ ಇದೆ. ಆ.3ರ ಬೆಳಗ್ಗೆ 10.30 ಗಂಟೆಗೆ ಇಲ್ಲಿನ ಬಿಐಇಟಿ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆ ನಡೆಸಿ, ಆ.5ರಂದು ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದರು.

ಆ.5 ಮತ್ತು 6ರಂದು ಸಂದರ್ಶನ ಮೂಲಕ ಮೆರಿಟ್ ಆಧಾರದಲ್ಲಿ 300 ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿ, ಸಂಕಲ್ಪದಲ್ಲಿ ಉಚಿತ ತರಬೇತಿ ನೀಡಲಾಗುವುದು. ಆ.8ರಂದು ಬೆಳಿಗ್ಗೆ 11ಕ್ಕೆ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಕಲ್ಪ-2 ರೆಗ್ಯುಲರ್ ತರಗತಿಗಳಿಗೆ ಚಾಲನೆ ನೀಡಲಾಗುವುದು. ಯುಪಿಎಸ್‌ಸಿಗೆ ಮಾತ್ರವಲ್ಲದೇ, ಕೆಪಿಎಸ್‌ಸಿ, ಕೆಇಎ ಪರೀಕ್ಷೆಗಳಿಗೂ ಸಂಕಲ್ಪ-2 ಮೂಲಕ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಕಾಲೇಜಿನ ಆರ್ಟ್ ಗ್ಯಾಲರಿಯ 1ನೇ ಮಹಡಿಯ ಸಂಕಲ್ಪ ತರಬೇತಿ ಕೇಂದ್ರದಲ್ಲಿ ಆ.10ರಂದು ಬೆಳಗ್ಗೆ 10.30ರಿಂದ ಆಯ್ಕೆಯಾದ 300 ವಿದ್ಯಾರ್ಥಿಗಳಿಗೆ ತರಬೇತಿ ಆರಂಭವಾಗಲಿದೆ. ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಇಎ ಪರೀಕ್ಷೆಗಳಡಿ ಮುಂಬರುವ ದಿನಗಳಲ್ಲಿ 72 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಹಾಗೂ 300ಕ್ಕೂ ಹೆಚ್ಚು ಕೆಎಎಸ್‌ ಹುದ್ದೆಗಳಿಗೆ ವಿದ್ಯಾರ್ಥಿಗಳಿಗೆ ಸಂಕಲ್ಪ-2ನಲ್ಲಿ ತರಬೇತಿ ನೀಡಲಾಗುತ್ತಿದೆ. ತರಬೇತಿಗೆ ಗೂಗಲ್ ಫಾರಂ ಕ್ಯೂರ್ ಕೋಡ್ ಮೂಲಕ ಹೆಸರು ನೋಂದಾಯಿಸಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗೆ ಮೊ-72599-52520 ನಂಬರಿಗೆ ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.

ಸಂಕಲ್ಪ-1 ತರಬೇತಿ ಯೋಜನೆಗೆ ವಿದ್ಯಾರ್ಥಿಗಳಿಗೆ ಸ್ಪಂದನೆ ಸಿಕ್ಕಿದ್ದು, 1541 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದರು. ದರಲ್ಲಿ 300 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದೇ ಯಶಸ್ಸಿನ ಹಿನ್ನೆಲೆಯಲ್ಲಿ ಸಂಕಲ್ಪ-2 ಯೋಜನೆಯನ್ನು ಮತ್ತಷ್ಚು ವಿಸ್ತೃತಗೊಳಿಸಿ, ಆರಂಭಿಸುತ್ತಿದ್ದೇವೆ. ಸರ್ಕಾರ 72 ಸಾವಿರಕ್ಕೂ ಅದಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತರಬೇತಿ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ತಿಳಿಸಿದರು.

ದಾವಣಗೆರೆ ವಿವಿ ಕುಲ ಸಚಿವ (ಆಡಳಿತ) ಶಬ್ಬೀರ್ ಘಂಟಿ, ಕುಲ ಸಚಿವ (ಪರೀಕ್ಷಾಂಗ) ಪ್ರೊ.ರಮೇಶ, ಐಎಎಸ್ ಬಾಬಾ ಸಂಸ್ಥೆ ಸಂಸ್ಥಾಪಕ ರಮೇಶ, ದಾವಿವಿ ಸಿಂಡಿಕೇಟ್ ಸದಸ್ಯ ಎನ್.ಸಿ.ಪ್ರಶಾಂತ, ದವನ ಕಾಲೇಜು ಕಾರ್ಯದರ್ಶಿ ವೀರೇಶ ಪಟೇಲ್ ಕಕ್ಕರಗೊಳ್ಳ ಇತರರು ಇದ್ದರು.

- - -

(ಬಾಕ್ಸ್‌)

* ಸರ್ಕಾರಿ ಶಾಲೆಗಳಿಗೆ ಕಾರ್ಗಿಲ್ ಯುದ್ಧ ಪುಸ್ತಕ ಹಂಚಿಕೆ

- ಕರ್ನಲ್ ರವೀಂದ್ರನಾಥ್‌ರ ಕಾರ್ಗಿಲ್ ಯುದ್ಧ ಕುರಿತ 600 ಪುಸ್ತಕ ಖರೀದಿ: ಡಾ.ಪ್ರಭಾ ದಾವಣಗೆರೆ: ಕಾರ್ಗಿಲ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಾವಣಗೆರೆಯ ಹೆಮ್ಮೆಯ ಪುತ್ರ, ವೀರಚಕ್ರ ಪುರಸ್ಕೃತ ಕರ್ನಲ್ ಎಂ.ಬಿ. ರವೀಂದ್ರನಾಥ್‌ ಅವರ ಕಾರ್ಗಿಲ್‌ ಯುದ್ಧ-ನಿರ್ಣಾಯಕ ತಿರುವು ಪುಸ್ತಕದ 600 ಪ್ರತಿಗಳನ್ನು ತಮ್ಮ ಸಂಸದರ ವೇತನದಲ್ಲಿ ಖರೀದಿಸಿ, ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಿಗೆ, ಶಾಲಾ ಗ್ರಂಥಾಲಯಗಳಿಗೆ ನೀಡುತ್ತಿದ್ದೇನೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಚಕ್ರ ಪುರಸ್ಕೃತ ಕರ್ನಲ್ ಎಂ.ಬಿ. ರವೀಂದ್ರನಾಥ ಕಾರ್ಗಿಲ್ ಯುದ್ಧದ ಕುರಿತಂತೆ ಅತ್ಯದ್ಭುತ ಪುಸ್ತಕ ತಂದಿದ್ದು, ತಮ್ಮ ಅನುಭವ, ಯುದ್ಧದ ಸನ್ನಿವೇಶನಗಳು, ಪ್ರತಿಕೂಲ ಪರಿಸ್ಥಿತಿಯಲ್ಲೂ ನಮ್ಮ ವೀರಯೋಧರ ದೇಶಪ್ರೇಮ, ಶತೃಗಳನ್ನು ಸದೆಬಡಿಯುವ ಕೆಚ್ಚು ಹೀಗೆ ಎಲ್ಲವನ್ನೂ ಒಳಗೊಂಡಿದೆ. ಇಂತಹ ಅಪರೂಪದ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕಿದೆ ಎಂದರು.

ಸರ್ಕಾರಿ ಶಾಲೆಗಳಿಗೆ 600 ಪುಸ್ತಕಗಳನ್ನು ನೀಡುತ್ತಿದ್ದು, ಶಾಲೆಯ ಗ್ರಂಥಾಲಯಗಳಲ್ಲಿ ಈ ಪುಸ್ತಕದ ಸಂಗ್ರಹ ಇರಬೇಕು. ಕಾರ್ಗಿಲ್ ಯುದ್ಧದಲ್ಲಿ ಭಾರತ ಭೂ ಸೇನೆ, ವಾಯು ಸೇನೆ, ಜಲ ಸೇನೆಗಳು ವಹಿಸಿದ ಮಹತ್ವದ ಪಾತ್ರ, ನಮ್ಮ ವೀರ ಯೋಧರ ತ್ಯಾಗ, ಬಲಿದಾನ, ಶೌರ್ಯವನ್ನು ಪುಸ್ತಕ ಕಟ್ಟಿಕೊಟ್ಟಿದೆ. ಕಾರ್ಗಿಲ್ ವಿಜಯ ಸಾಧಿಸಿದ ದಿನ ಇವತ್ತು. ಆ ಎಲ್ಲಾ ಯೋಧರು, ಯೋಧರ ತ್ಯಾಗ, ಬಲಿದಾನ ಸ್ಮರಿಸುವ, ಕಾರ್ಗಿಲ್ ವಿಜಯೋತ್ಸವದ ದಿನ ಇಂದು. ಕರ್ನಲ್ ಎಂ.ಬಿ. ರವೀಂದ್ರನಾಥ ಕುಟುಂಬ ಸಹ ಪುಸ್ತಕ ಮಾರಾಟದಿಂದ ಬಂದ ಹಣವನ್ನೆಲ್ಲಾ ಸೇನೆಯ ಯೋಧರ ಕಲ್ಯಾಣಕ್ಕೆಂದು ಕಳಿಸುವ ಮೂಲಕ ದೇಶಪ್ರೇಮ ಮೆರೆಯುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಶ್ಲಾಘಿಸಿದರು.

- - -

-26ಕೆಡಿವಿಜಿ5, 6:

ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಂಕಲ್ಪ-2 ಯೋಜನೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡದಾಳವಟ್ಟದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ
ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗುವುದು ಮುಖ್ಯ: ಸಂಸದ