- ಸೋಮಶೇಖರ ಶಿವಾಚಾರ್ಯ ಶ್ರೀ ಸಲಹೆ । ನೊಳಂಬ ಸಂಘದಿಂದ ಪುರಸ್ಕಾರ, ಸನ್ಮಾನ ಕಾರ್ಯಕ್ರಮ
ಕನ್ಕಡಪ್ರಭ ವಾರ್ತೆ ಹೊನ್ನಾಳಿ
ಪೋಷಕರು ತಮ್ಮ ಮಕ್ಕಳು ನೀಟ್ ಪರೀಕ್ಷೆ ಬರೆದು ಅತಿ ಹೆಚ್ಚು ಅಂಕಗಳ ಪಡೆಯಬೇಕೆಂಬ ನಿರೀಕ್ಷೆಯಲ್ಲಿ ಅವರನ್ನು ತಯಾರು ಮಾಡುತ್ತಿದ್ದಾರೆಯೇ ಹೊರತು, ಮಕ್ಕಳು ಭವಿಷ್ಯದ ಜೀವನದಲ್ಲಿ ನೀಟಾಗಿ ಬದುಕುವುದನ್ನು ಕಲಿಸುವ ಕಡೆಗೆ ತಲೆಕಡೆಸಿಕೊಳ್ಳುವುದಿಲ್ಲ ಎಂದು ಬೇಲೂರು ತಾಲೂಕಿನ ಹಳೇಬೀಡು ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ದಾವಣಗೆರೆ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘದಿಂದ ಭಾನುವಾರ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಸಕ ಡಿ.ಜಿ.ಶಾಂತನಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮ್ಮ ರಾಜಕೀಯ ಬೆಳವಣಿಗೆಯಲ್ಲಿ ನೊಳಂಬ ವೀರಶೈವ ಲಿಂಗಾಯತ ಸಮಾಜದ ಕೊಡುಗೆ ಅಪಾರವಾಗಿದೆ. ಮತದಾನ ನಿಮ್ಮ ಹಕ್ಕು, ಅದನ್ನು ಸರಿಯಾಗಿ ಬಳಸಿ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಇದುವರೆಗೂ ಪಕ್ಷಾತೀತ, ಜಾತ್ಯತೀತ ಹಾಗೂ ವರ್ಗಾತೀತವಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾನಿಲಯ ಶಿವಮೊಗ್ಗದ ಉಪ ಕುಲಪತಿ ಡಾ. ಎಂ.ವಿ. ಧನಂಜಯ ಅವರು ಪ್ರಸ್ತುತ ಸಮಾಜದ ಸ್ಥಿತಿಗತಿಗಳ ಕುರಿತು ಮಾತನಾಡಿದರು. ನೊಳಂಬ ಸಂಘದ ಜಿಲ್ಲಾಧ್ಯಕ್ಷ ಡಾ. ಆಶೋಕ್ ಕುಮಾರ್ ವಿ.ಪಾಳೇದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕಾರ್ಯದರ್ಶಿ, ಡಾ. ಈ.ವಿರೂಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಾಕೇಶ್ ಬಿ.ಸಿ., ಮಲ್ಲಿಕಾರ್ಜುನ ಹೆಗ್ಗೊಳ್ಳಿ ಟಿ.ಎ. ಕುಸಗಟ್ಟಿ, ಕಡದಕಟ್ಟೆ ಜಗದೀಶ್ ಸೇರಿದಂತೆ ನೊಳಂಬ ಸಮಾಜದ ಹಲವಾರು ಮುಖಂಡರು ಇದ್ದರು. ಜ್ಯೋತಿ ದೇವರಮನೆ ನಿರೂಪಿಸಿದರು.
(ಕೋಟ್) ಪ್ರತಿಭಾ ಪುರಸ್ಕಾರ ಮಾಡುತ್ತಾರೆ ಎನ್ನುವ ಕಾರಣಕ್ಕೆ ಯಾರೂ ವಿದ್ಯಾಭ್ಯಾಸ ಮಾಡುವುದಿಲ್ಲ. ಆದರೆ ಭವಿಷ್ಯದ ಉತ್ತಮ ಜೀವನಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ಪ್ರಸ್ತುತ ದಿನಗಳಲ್ಲಿ ಪ್ರತಿಭೆಯೊಂದೇ ಸಾಧನೆಗೆ ಮಾನದಂಡವಾಗಿದೆ.
- - -