ಕನ್ನಡಪ್ರಭ ವಾರ್ತೆ ರಾಯಚೂರು
ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಗೆ ನೀರಿನ ಹರಿವು ಪ್ರಮಾಣದಲ್ಲಿ ಏರಿಕೆಯಾಗಿದೆ. ಎರಡೂ ಜಲಾಶಯಗಳಲ್ಲೂ ನೀರಿನ ಸಂಗ್ರಹಣೆ ಗಣನೀಯವಾಗಿ ಹೆಚ್ಚಳಗೊಂಡಿದೆ. ಆಲಮಟ್ಟಿ ಜಲಾಶಯದ ಕಳೆದ 24 ಗಂಟೆಗಳ ಸರಾಸರಿ ಒಳಹರಿವು 83,948 ಕ್ಯೂಸೆಕ್ ಆಗಿದ್ದು, ಸರಾಸರಿ ಹೊರಹರಿವು 49,550 ಕ್ಯೂಸೆಕ್ ಆಗಿದೆ. ಪ್ರಸ್ತುತ ನದಿಗೆ 35,000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಜಲಾಶಯದಲ್ಲಿ ಒಟ್ಟು 111.006 ಟಿಎಂಸಿ ನೀರು ಸಂಗ್ರಹವಾಗಿದ್ದು, ಗರಿಷ್ಠ ಸಂಗ್ರಹಣೆಯ ಶೇ.90.19 ರಷ್ಟಾಗಿದೆ. ಪ್ರಸ್ತುತ ಸ್ಟೋರೇಜ್ 93.386 ಟಿಎಂಸಿ ಇದೆ.
ನಾರಾಯಣಪುರ ಜಲಾಶಯದ ನೀರಿನ ಮಟ್ಟ 492.09 ಮೀಟರ್ ದಾಖಲಾಗಿದೆ. ಕಳೆದ 24 ಗಂಟೆಗಳ ಸರಾಸರಿ ಒಳಹರಿವು 52,370 ಕ್ಯೂಸೆಕ್ ಆಗಿದ್ದು, ಸರಾಸರಿ ಹೊರಹರಿವು 32,686 ಕ್ಯೂಸೆಕ್ ಆಗಿದೆ. ಪ್ರಸ್ತುತ ನದಿಗೆ 35,000 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಜಲಾಶಯದಲ್ಲಿ ಒಟ್ಟು 32.56 ಟಿಎಂಸಿ ನೀರು ಸಂಗ್ರಹವಾಗಿದ್ದು, ಗರಿಷ್ಠ ಸಂಗ್ರಹಣೆಯ ಶೇ.97.75 ರಷ್ಟಾಗಿದೆ. ಸ್ಟೋರೇಜ್ 17.80 ಟಿಎಂಸಿ ಇದೆ.ನಾರಾಯಣಪುರ ಬಸವಸಾಗರ ಜಲಾಶಯವು ಶೇ.98 ರಷ್ಟು ಭರ್ತಿಯಾಗಿದ್ದು, 35 ಸಾವಿರ ಕ್ಯುಸೆಕ್ ನೀರು ಒಳಹರಿವನ್ನು ಹೊಂದಿದೆ ಈ ಹಿನ್ನೆಲೆಯಲ್ಲಿ ಜಲಾಶಯದ ಗೇಟ್‌ಗಳಿಂದ ನದಿಗೆ ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಮುಂಜಾಗೃತ ಕ್ರಮವಾಗಿ ತಾಲೂಕಿನ ಗುರ್ಜಾಪುರ ಸಮೀಪದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರೀಜ್ ಕಂ ಬ್ಯಾರೇಜ್‌ನ 196 ಗೇಟ್‌ಗಳನ್ನು ಕ್ರೇನ್ ಮುಖಾಂತರ ತೆರದು ನೀರು ಮುಂದೆ ಹರಿಸಲು ಕ್ರಮ ವಹಿಸಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಬೆಳೆ, ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ವೇಳೆ ಜಲಾಶಯದ ಮುಖಾಂತರ ನದಿಗೆ ನೀರು ಹರಿಸುತ್ತಿರುವುದರಿಂದ ನದಿಪಾತ್ರದ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಗ್ರಾಮಗಳ ಜನರು, ರೈತರಲ್ಲಿ ಸಂತಸಗೊಂಡಿದ್ದಾರೆ. ಕೃಷ್ಣಾ ನದಿ ವ್ಯಾಪ್ತಿಗೆ ಬರುವ ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ಪಾತ್ರದಲ್ಲಿರುವ ನೂರಾರು ಹಳ್ಳಿಗಳಲ್ಲಿನ ರೈತರು ತಾವು ಬೆಳೆದಂತಹ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭಿಸುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗೂ ಇದರಿಂದ ಪರಿಹಾರ ದೊರೆತಂತಾಗಿದ್ದು, ನದಿಗೆ ನೀರು ಹರಿದು ಬರುತ್ತಿರುವುದು ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ.