ಕನ್ನಡಪ್ರಭ ವಾರ್ತೆ ಹಾವೇರಿ
ಉದ್ಯಮಿಗಳಿಗೆ ಉಜ್ವಲ ಭವಿಷ್ಯವಿದೆ. ದೊಡ್ಡ ದೊಡ್ಡ ಕಂಪನಿಗಳನ್ನು ಮಾದರಿಯಾಗಿಟ್ಟುಕೊಂಡು ಮಾರುಕಟ್ಟೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಸಣ್ಣ ಉದ್ಯಮದಾರರಿಗೆ ಮಾರುಕಟ್ಟೆ ಕೊರತೆ ಇದೆ. ವಿವಿಧ ಇಲಾಖೆಗಳು ಇಂತಹ ಉದ್ಯಮದಾರರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಮುಂದೆ ಬಂದು ಉತ್ತೇಜನ ನೀಡಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಹೇಳಿದರು.ನಗರದ ಜಿಲ್ಲಾ ಗುರುಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಕೈಗಾರಿಕೆ ವಿಭಾಗ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದವರು ಎಲ್ಲರೂ ಬ್ಯಾಂಕ್ ಸಾಲ ಪಡೆದು ಉದ್ಯಮ ಆರಂಭಿಸಿದ್ದಾರೆ. ಮಹಿಳಾ ಒಕ್ಕೂಟಗಳಿಗೆ ಹಾಗೂ ಮಹಿಳಾ ಫಲಾನುಭವಿಗಳಿಗೆ ವಿಶೇಷವಾಗಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್, ಆಧುನಿಕತೆಯ ಬಿರುಗಾಳಿ ತಡೆದು ನಿಲ್ಲುವ ಶಕ್ತಿ ನಮ್ಮ ಭಾರತೀಯ ಸಂಸ್ಕೃತಿ, ಗುಡಿಗೈಕಾರಿಕಾ, ಕರಕುಶಲ ಪರಂಪರೆಗಿದೆ. ವಿದೇಶಗಳಿಂದಲೂ ಭಾರತೀಯ ದೇಶಿ ವಸ್ತುಗಳಿಗೆ ಬಹಳ ಬೇಡಿಕೆ ಇದೆ. ಗುಡಿ ಕೈಗಾರಿಕೆಗೆ ಆಧುನಿಕ ಸ್ಪರ್ಶ ನೀಡಿದರೆ ಹಾಗೂ ಹೊಸ ವಿನ್ಯಾಸದೊಂದಿಗೆ ಉತ್ಪಾದನೆ ಆರಂಭಿಸಿದರೆ ನಮ್ಮ ಯುವ ಸಮೂಹ ಯಾರು ನಿರುದ್ಯೋಗಿಗಳಾಗಿ ಉಳಿಯುವುದಿಲ್ಲ. ಆರ್ಥಿಕವಾಗಿ ಸದೃಢರಾಗುವ ಜೊತೆಗೆ ಇತರರಿಗೂ ಉದ್ಯೋಗ ನೀಡಬಹುದು ಎಂದು ಹೇಳಿದರು.
ಒಂದು ಕಾಲದಲ್ಲಿ ಸಿರಿಧಾನ್ಯಗಳ ಬಡವರ ಆಹಾರ ಎಂದು ಹೇಳಲಾಗುತ್ತಿತ್ತು. ಇಂದು ಸಿರಿಧಾನ್ಯ ಸಿರಿವಂತರ ಆಹಾರವಾಗಿವೆ. ಆಗಿನ ಕಾಲದಲ್ಲಿ ಐದರಿಂದ ಹತ್ತು ರೂ.ಗಳಿಗೆ ಸೇರು ಪ್ರಮಾಣದಲ್ಲಿ ದೊರೆಯುತ್ತಿದ್ದ ಸಿರಿಧಾನ್ಯಗಳಿಗೆ ಮಾರುಕಟ್ಟೆ ಸೃಷ್ಟಿಯಾಗಿದೆ. ನಿರುದ್ಯೋಗ ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸಾಲ, ಸಹಾಯಧನ ಹಾಗೂ ತರಬೇತಿ ನೀಡುತ್ತಿದೆ. ಕೈಗಾರಿಕೆ ಇಲಾಖೆ ನವ ಉದ್ಯಮಗಳನ್ನು ಆರಂಭಿಸಲು ಮಾರ್ಗದರ್ಶನ ಮಾಡುತ್ತದೆ. ಬ್ಯಾಂಕ್‌ಗಳು ಸಬ್ಸಿಡಿ ಜೊತೆಗೆ ಹಣಕಾಸಿನ ನೆರವನ್ನು ನೀಡುತ್ತವೆ. ಸಣ್ಣ ಉದ್ಯಮಗಳಿಗೆ ಮಾಧ್ಯಮಗಳು ಪ್ರಚಾರ ನೀಡುವುದರ ಮೂಲಕ ಮಾರುಕಟ್ಟೆ ಸೃಷ್ಟಿ ಕೊಡುತ್ತವೆ. ದುಡಿಯುವ ಮನಸ್ಸು ಇದ್ದವರು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಲಾಭದಾಯಕ ಉದ್ಯಮಿಗಳಾಗಿ ಬೆಳೆದು, ಉದ್ಯೋಗ ನೀಡುವ ಮಾಲೀಕರಾಗಿ ಬೆಳೆಯಬಹುದು ಎಂದರು.ಸರ್ಕಾರ ಸ್ವಂತ ಉದ್ಯೋಗಕ್ಕಾಗಿ ಮಾರ್ಗದರ್ಶನದ ಜೊತೆಗೆ ಹಣಕಾಸಿನ ಸೌಲಭ್ಯವೂ ನೀಡುವುದಲ್ಲದೇ ಇಂತಹ ವಸ್ತುಪ್ರದರ್ಶನ ಮೂಲಕ ಉತ್ಪಾದಕರ ಹಾಗೂ ಗ್ರಾಹಕರ ನೇರ ಸಂಪರ್ಕ ಸೇತುವೆಯಾಗಿ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸುತ್ತಿದೆ. ಈ ಎಲ್ಲ ಸೌಲಭ್ಯಗಳ ಜೊತೆಗೆ ಸಣ್ಣ ಕೈಗಾರಿಕೆ ಮೂಲಕ ಉತ್ಪಾದನೆಗೆ ತೊಡಗುವವರು ಸಾಮಾಜಿಕ ಜಾಲತಾಣಗಳ ಮೂಲಕ ಮಾರುಕಟ್ಟೆ ವಿಸ್ತರಣೆಗೆ ಹೆಚ್ಚಿನ ಅವಕಾಶಗಳಿವೆ ಎಂದರು.
ಕರಕುಶಲ ವಸ್ತುಗಳು: ವಸ್ತು ಪ್ರದರ್ಶನದಲ್ಲಿ ಗೃಹ ಅಲಂಕಾರಿ, ವಸ್ತುಗಳು, ಮಕ್ಕಳ ಆಟಿಕೆ ಸಾಮಾನು, ಬ್ಯಾಗ್, ತಿಂಡಿ ತಿನಿಸುಗಳು, ಅಗರಬತ್ತಿ, ಉಣ್ಣೆ ಉತ್ಪನ್ನಗಳು, ಖಾದಿ ಉತ್ಪನ್ನಗಳು, ಪುರುಷರ ಶರ್ಟ್ ಸೇರಿದಂತೆ ವಿವಿಧ ವಸ್ತುಗಳು ಮಾರಾಟ ಮಾಡಲಾಗುತ್ತಿದೆ. ೨೩ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಹಾವೇರಿ, ಗದಗ, ಧಾರವಾಡ ಹಾಗೂ ದಾವಣಗೆರೆ ಜಿಲ್ಲೆಗಳ ಸಣ್ಣ ಉದ್ಯಮದಾರರು ಭಾಗವಹಿಸಿದ್ದರು. ಹಾಗಾಗಿ ಗ್ರಾಹಕರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಸ್ತುಗಳು ದೊರೆಯಲಿವೆ.ಕಾರ್ಯಕ್ರಮದಲ್ಲಿ ಕೆ.ಎಸ್.ಎಫ್.ಸಿ. ಅಧಿಕಾರಿ ಎಸ್.ಎಫ್. ಹಿರೇಮಠ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿನಾಯಕ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ಜಯಶ್ರೀ ಆರ್. ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್. ಹೊನ್ನೆಗೌಡರ ವಂದಿಸಿದರು.