ಕೊಪ್ಪಳ: ಕೊನೆಗೂ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಭಿವೃದ್ಧಿ ಪ್ರಾಧಿಕಾರದ ಅಧೀನ ಕಾರ್ಯದರ್ಶಿ ಅವರು ಆದೇಶವನ್ನು ಹೊರಡಿಸಿ, ಸದಸ್ಯರನ್ನು ನೇಮಕ ಮಾಡಿದ್ದಾರೆ.
ಮಾರ್ಕೇಂಡೇಶ್ವರ ಕಲ್ಲಣ್ಣವರ, ಚನ್ನಬಸಯ್ಯ ಚನ್ನಒಡೆಯರ, ಅಬ್ದುಲ್ ಲತೀಫ್ ಖತೀಬ್, ಕಾಳಮ್ಮ ಶಿವಶರಣಬಸವರಾಜ ಅವರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.ಕೊನೆಗೂ ನೇಮಕ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷ ಸ್ಥಾನಕ್ಕೆ ವಿಪರೀತ ಪೈಪೋಟಿ ಇದ್ದಿದ್ದರಿಂದ ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾಗಿದ್ದರೂ ನೇಮಕ ಮಾಡಿರಲಿಲ್ಲ. ಯಾರನ್ನೇ ಮಾಡಿದರೂ ವಿವಾದ ಭುಗಿಲೆಳುತ್ತದೆ. ಸ್ಪರ್ಧೆಯಲ್ಲಿ ಹಲವರು ಇದ್ದರು. ಆದರೆ, ಈಗ ಲೋಕಸಭಾ ಚುನಾವಣೆಯೂ ಮುಗಿದಿರುವ ಹಿನ್ನೆಲೆಯಲ್ಲಿ ಹಿಟ್ನಾಳ ಕುಟುಂಬ ಅಳೆದು ತೂಗಿ, ಭಾಗ್ಯನಗರದ ನಿವಾಸಿಯಾಗಿರುವ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರ ಹೆಸರನ್ನು ಸೂಚಿಸಿದೆ. ಕಾಂಗ್ರೆಸ್ ಕಟ್ಟಾಳಿನಂತೆ ಇರುವ ಶ್ರೀನಿವಾಸ ಗುಪ್ತಾ ಅವರು ಇದುವರೆಗೂ ಅಧಿಕಾರದಿಂದ ದೂರವೇ ಇದ್ದರು. ಹೀಗಾಗಿ, ಅವರ ನೇಮಕ ಸೂಕ್ತ ಎನ್ನುವ ಮಾತು ಈಗ ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ.
ಇದುವರೆಗೂ ಒಂದೇ ಒಂದು ಲೇ ಔಟ್ ಮಾಡಿ, ನಿವೇಶನ ಹಂಚಿಕೆ ಮಾಡಿದ ಉದಾಹರಣೆ ಇಲ್ಲ. ಮಾಡಿದ ಒಂದು ಲೇ ಔಟ್ ಮೆಡಿಕಲ್ ಕಾಲೇಜು ಪಾಲಾಗಿದ್ದರಿಂದ ಉಳಿದ ಒಂದಷ್ಟು ನಿವೇಶನ ಹಂಚಿದ್ದೆ ದೊಡ್ಡ ಸಾಧನೆ.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಹಲವು ದಿನಗಳಿಂದ ಖಾಲಿ ಇತ್ತು. ಈಗ ನೇಮಕ ಮಾಡಲಾಗಿದ್ದು, ಅಭಿವೃದ್ಧಿಯನ್ನು ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.