ಬಳ್ಳಾರಿ ವಿವಿ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕ ಮೀರಿ ನಮೂದು!

KannadaprabhaNewsNetwork |  
Published : Oct 19, 2024, 12:24 AM IST
18ಕೆಪಿಎಲ್22 ಬಳ್ಳಾರಿ ವಿವಿಯೂ ಗರಿಷ್ಠ ಅಂಕಗಳನ್ನು ಹೆಚ್ಚಿಸಿರುವುದು  | Kannada Prabha

ಸಾರಾಂಶ

ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕ 600 ಇದ್ದರೆ 750 ಎಂದು ನಮೂದಿಸಲಾಗಿದೆ. ಜತೆಗೆ ಒಂದೇ ವಿಷಯವನ್ನು ಎರಡು ಬಾರಿ ಮುದ್ರಿಸಿ, ಅಂಕ ನೀಡಲಾಗಿದೆ. ಇಂತಹ ದೋಷಪೂರಿತ ಅಂಕಪಟ್ಟಿ ಪಡೆದ ವಿದ್ಯಾರ್ಥಿಗಳು ಈಗ ಪರದಾಡುವಂತಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ನಾಲ್ಕಾರು ಅಂಕಗಳು ಹೆಚ್ಚು ಅಥವಾ ಕಡಿಮೆ ಬರುವುದನ್ನು ನೋಡಿದ್ದೇವೆ, ಆದರೆ, ಇಲ್ಲಿ ಗರಿಷ್ಠ ಅಂಕಗಳಿಗಿಂತಲೂ ಅಧಿಕ ಅಂಕಗಳನ್ನು ನಮೂದಿಸಲಾಗುತ್ತದೆ! ಇದು, ಅಚ್ಚರಿಯಾದರೂ ಸತ್ಯ.

ಇದು, ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪವಾಡ.

ಗರಿಷ್ಠ 600 ಅಂಕಗಳು ಇದ್ದರೆ ಅದಕ್ಕಿಂತ ಹೆಚ್ಚು ಅಂಕ ನಮೂದಿಸಲಾಗಿದೆ. ಕೇವಲ ಪ್ರಕಟಿತ ಫಲಿತಾಂಶದಲ್ಲಿ ಆಗಿರುವ ದೋಷ ಇದಲ್ಲ. ವಿಶ್ವವಿದ್ಯಾಲಯದಿಂದ ನೀಡುವ ಅಂಕಪಟ್ಟಿಯಲ್ಲಿಯೂ ಅದನ್ನೇ ಮುದ್ರಿಸಲಾಗಿದೆ.

ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಫಲಿತಾಂಶ ಪ್ರಕಟ ಮಾಡುವುದೇ ತಡವಾಗಿ, ಪರೀಕ್ಷೆ ಬರೆದು ಒಂದೂವರೆ ವರ್ಷವಾದರೂ ಕೆಲವು ಬಾರಿ ಫಲಿತಾಂಶ ಪ್ರಕಟ ಮಾಡುವುದಿಲ್ಲ. ಇನ್ನು ಫಲಿತಾಂಶ ಪ್ರಕಟ ಮಾಡಿದ ಮೇಲಿನ ದೋಷಗಳು ಅಷ್ಟಿಷ್ಟಲ್ಲ.

ವಿದ್ಯಾರ್ಥಿಗಳಿಗೆ ಅಚ್ಚರಿ: ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಪದವಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ತಮಗೆ ಮಾರ್ಕ್ಸ್ ಕಾರ್ಡ್‌ನಲ್ಲಿ ಬಂದಿರುವ ಅಂಕ ನೋಡಿ ಅಚ್ಚರಿಗೊಳಗಾಗಿದ್ದಾರೆ. ಇರುವುದೇ 600 ಗರಿಷ್ಠ ಅಂಕಗಳು. ಆದರೆ, ಗರಿಷ್ಠ ಅಂಕಗಳನ್ನು 750 ಎಂದು ನಮೂದಿಸಿದ್ದಾರೆ. ಇನ್ನೂ ವಿಶೇಷವೆಂದರೆ ಒಂದೇ ವಿಷಯವನ್ನು ಎರಡು ಬಾರಿ ಮುದ್ರಿಸಿದ್ದಾರೆ. ಮೆಕ್ಯಾನಿಕಲ್ ವಿಷಯವನ್ನು ಎರಡು ಬಾರಿ ಮುದ್ರಿಸಿದ್ದಾರೆ. ಎರಡು ಬಾರಿಯೂ ಅಂಕ ನೀಡಿದ್ದಾರೆ.

ಇಂತಹ ಸಾಲು ಸಾಲು ದೋಷಗಳನ್ನು ಅಂಕಪಟ್ಟಿಯಲ್ಲಿ ಕಾಣಬಹುದಾಗಿದೆ. 2021-22ನೇ ಸಾಲಿನಲ್ಲಿ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಇಂದಿಗೂ ಅಂಕಪಟ್ಟಿಯ ದೋಷ ಸರಿಪಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದ್ಯಾವುದಕ್ಕೂ ಬಳ್ಳಾರಿ ವಿವಿಯಲ್ಲಿ ಉತ್ತರ ಹೇಳುವವರೇ ಇಲ್ಲ.

ಸಾಲು ಸಾಲು ವರದಿಗಳು ಪ್ರಕಟವಾಗುತ್ತಿದ್ದರೂ ವಿಶ್ವವಿದ್ಯಾಲಯ ಈ ಕುರಿತು ಪ್ರತಿಕ್ರಿಯೆ ನೀಡುತ್ತಿಲ್ಲ. ವಿದ್ಯಾರ್ಥಿಗಳು ಬರೆದಿರುವ ಪತ್ರಗಳಿಗೆ, ಕಾಲೇಜು ಪ್ರಾಚಾರ್ಯರು ಬರೆದಿರುವ ಪತ್ರಗಳಿಗೆ ಬಳ್ಳಾರಿ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಉತ್ತರ ನೀಡುವ ಪರಿಪಾಠವೇ ಇಲ್ಲ.

ಅಷ್ಟಕ್ಕೂ ಕಾಲೇಜು ಪ್ರಾಚಾರ್ಯರು ಖುದ್ದು ಭೇಟಿಯಾಗಿ ಕೇಳಿದರೆ ನೂರೆಂಟು ಪ್ರಶ್ನೆಗಳನ್ನು ಹಾಕುತ್ತಾರೆ. ಯಾರು ತಪ್ಪು ಮಾಡಿದ್ದಾರೆ ಅವರನ್ನೇ ಕೇಳಿ, ಯಾರು ಇದ್ದಾಗ ದೋಷವಾಗಿದೆಯೋ ಅವರನ್ನೇ ಕೇಳಿ ಎಂದು ದಬಾಯಿಸುತ್ತಾರೆ.

ಮಿತಿಮೀರಿದ ದೋಷಗಳು: ಬಳ್ಳಾರಿ ವಿವಿಯಲ್ಲಿ ಫಲಿತಾಂಶ ಘೋಷಣೆಯಲ್ಲಿಯೂ ದೋಷ, ಫಲಿತಾಂಶ ನೀಡುವಲ್ಲಿಯೂ ವಿಳಂಬ. ಈಗ ಅಂಕಪಟ್ಟಿಯಲ್ಲಿಯೂ ದೋಷವಿರುವುದು ಕಂಡು ಬರುತ್ತಿವೆ. ಹೀಗೆ ಒಂದೆರಡು ಸಮಸ್ಯೆಯಲ್ಲ. ನೂರಾರು ವಿದ್ಯಾರ್ಥಿಗಳು ಪದವಿ ಪಾಸಾಗಿದ್ದರೂ ಮುಂದಿನ ಕೋರ್ಸ್ ಪ್ರವೇಶ ಪಡೆಯಲು ಆಗದಂತೆ ಆಗಿದೆ. ವಿದ್ಯಾರ್ಥಿಗಳು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ.

ಸಮಗ್ರ ತನಿಖೆಯಾಗಬೇಕು: ಬಳ್ಳಾರಿ ವಿಶ್ವವಿದ್ಯಾಲಯದ ಅವಾಂತರಗಳ ಕುರಿತು ಸಮಗ್ರ ತನಿಖೆಯಾಗಬೇಕಾಗಿದೆ. ಅಲ್ಲಿ ನಡೆಯುತ್ತಿರುವ ಅವಾಂತರಗಳು ಕೇವಲ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ಇಡೀ ಶಿಕ್ಷಣ ವ್ಯವಸ್ಥೆಗೆ ಪೆಟ್ಟು ಬೀಳುವಂತೆ ಇವೆ.

ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯ ಮಣ್ಣುಪಾಲಾಗುವಂತೆ ಆಗಿದೆ. ಇದೆಲ್ಲದರ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಲು ಆಗದಂತೆ ಆಗಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.ಬಳ್ಳಾರಿ ವಿವಿಯಲ್ಲಿ ಆಗುತ್ತಿರುವ ದೋಷಗಳಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪೆಟ್ಟುಬಿದ್ದಿದೆ. ಸಮಗ್ರ ತನಿಖೆಯಾಗಬೇಕು. ಅಂದಾಗಲೇ ಸತ್ಯ ಹೊರಬರುತ್ತದೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಹೇಳಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...