ಸರ್ಕಾರಿ ಜಾಗಗಳು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದು: ಆಕ್ರೋಶ

KannadaprabhaNewsNetwork | Published : Dec 24, 2024 12:45 AM

ಸಾರಾಂಶ

ಕಸಬಾ ಬೆಳವಾಡಿಯ ಗ್ರಾಮದ ಸರ್ವೇ 64ರ ಸರ್ಕಾರಿ 70 ಎಕರೆ ಜಮೀನು ಖಾಸಗಿ ವ್ಯಕ್ತಿಗಳು ನಿವೇನ ಮಾಡಲು ಅತಿಕ್ರಮ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ನ.6 ರಂದು ಸಮಿತಿಯಿಂದ ದೂರು ನೀಡಿದ್ದು, ಸರ್ಕಾರಿ ಜಮೀನಾಗಿರುವುದರಿಂದ ಕಂದಾಯ ಇಲಾಖೆಗೆ ಸೇರಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ವಿವಿಧ ಸರ್ಕಾರಿ ಜಾಗಗಳು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿದೆ. ಅದನ್ನು ಸರಿ ಪಡಿಸದ ಕಂದಾಯ ಇಲಾಖೆ ಹಾಗೂ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ನಿವೇಶನವನ್ನಾಗಿ ಪರಿವರ್ತನೆ ಮಾಡುತ್ತಿರುವುದನ್ನು ಖಂಡಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ತಹಸೀಲ್ದಾರ್ ಅವರಿಗೆ ತರಾಟೆ ತೆಗೆದುಕೊಂಡರು.

ಪಟ್ಟಣದ ತಾಲೂಕು ಕಚೇರಿಗೆ ಹಿರಿಯ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಕಾರ್ಯಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಕಂದಾಯ ಇಲಾಖೆ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಸಬಾ ಬೆಳವಾಡಿಯ ಗ್ರಾಮದ ಸರ್ವೇ 64ರ ಸರ್ಕಾರಿ 70 ಎಕರೆ ಜಮೀನು ಖಾಸಗಿ ವ್ಯಕ್ತಿಗಳು ನಿವೇನ ಮಾಡಲು ಅತಿಕ್ರಮ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ನ.6 ರಂದು ಸಮಿತಿಯಿಂದ ದೂರು ನೀಡಿದ್ದು, ಸರ್ಕಾರಿ ಜಮೀನಾಗಿರುವುದರಿಂದ ಕಂದಾಯ ಇಲಾಖೆಗೆ ಸೇರಿದೆ ಎಂದರು.

ಸರ್ಕಾರದ ಪರವಾಗಿ ನಿಂತು ಜಮೀನು ಸುತ್ತಲೂ ತಂತಿ ಬೇಲಿ ನಿರ್ಮಿಸುವುದಾಗಿ ಹೇಳಿದ್ದು ಇದುವರೆವಿಗೂ ಕ್ರಮವಿಲ್ಲದೆ ಕೈಬಿಟ್ಟಿರುವಂತೆ ಕಂಡು ಬಂದಿದೆ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಿತಿ ಕಾರ್ಯಕರ್ತರು ಒತ್ತಾಯಿಸಿದರು.

ತಾಲೂಕಿನ ಕಸಬಾ ಹೋಬಳಿ ಮಹದೇವಪುರ ಗ್ರಾಮದ ಚಿಕ್ಕಮ್ಮ ಚಿಕ್ಕದೇವಿ ದೇವಾಲಯದ ಜಾಗಕ್ಕೆ ಸೇರಿದರೂ ಇದೀಗ 6 ಗುಂಟೆ ಜಾಗ ಬಂಜರು ‘ವಕ್ಫ್ ಆಸ್ತಿ’ ಎಂದು ಆರ್‌ಟಿಸಿಯಲ್ಲಿ ನಮೂದಾಗಿದೆ. ಕಲಂ 9ರಲ್ಲಿ ಬಂಜರೂ ಭೂಮಿ ಎಂದು ಇದೆ ಎಂದರು.

ತದನಂತರ 1974ರಲ್ಲಿ ಕಲಂ 12ರಲ್ಲಿ ಚಿಕ್ಕಮ್ಮ ಚಿಕ್ಕದೇವಿ ದೇವಾಲಯ ಎಂದು ನಮೂದಾಗಿದೆ. ಅಂತಹ ಹಿಂದು ದೇವಾಲಯದ ಜಾಗ ಇದೀಗ 2023 ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಹೇಗೆ ಎಂದು ಕಂದಾಯ ಅಧಿಕಾರಿಗಳಲ್ಲಿ ಪ್ರಶ್ನೆ ಮಾಡಿ ಕಳೆದ ತಿಂಗಳು ಈ ಬಗ್ಗೆ ಚರ್ಚೆಗಳು ನಡೆದು ತಾಂತ್ರಿಕ ದೋಷದಿಂದ ತಪ್ಪಾಗಿದೆ ತಿದ್ದುಪಡಿ ಮಾಡುವುದಾಗಿ ಭರವಸೆ ನೀಡಿದ ತಹಶೀಲ್ದಾರ್ ಇನ್ನು ಒಂದು ತಿಂಗಳು ಕಳೆದರೂ ಕ್ರಮವಿಲ್ಲದ ಇಲಾಖೆ ವಿರುದ್ದ ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗೊಳ ಹೋಬಳಿಯ ಗ್ಯಾಮನ್ ಕಾರ್ಖಾನೆ ಬಳಿ ನೂರಾರು ಎಕರೆ ಜಮೀನು ಸರ್ಕಾರಿ ಬಿ. ಕರಾಬ್ ಜಮೀನು ಅತಿ ಕ್ರಮ ಮಾಡಿ ನಿವೇಶನ ಮಾಡುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಈಗಾಗಲೇ ಹಲವು ಬಾರಿ ದೂರು ಸಲ್ಲಿಸಲಾಗಿದೆ. ಇದರ ಜೆತೆ ಹುಲಿಕೆರೆ ಜುವಾರಿ ಕಂಪನಿಯವರು ಹತ್ತಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಸಾರ್ವಜನಿಕರಿಗೆ ರಸ್ತೆ ಬಿಡದೆ ಅಕ್ರಮ ಮಾಡಿದ್ದರು ಕ್ರಮವಿಲ್ಲ ಎಂದರು.

ಯಾವ ದೂರಿಗೂ ಸ್ಪಂದನೆಗಳಿಲ್ಲದ ಇಲಾಖೆ ಏಕೆ ಇರಬೇಕು ಎಂದು ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣೇಗೌಡ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಅವರನ್ನು ಪ್ರಶ್ನೆ ಮಾಡಿ ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಮುಂದೆ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಮಾತನಾಡಿ, ಮಹದೇವಪುರ ಬಳಿಯ ಚ್ಕಿಕ್ಕಮ್ಮ ಚಿಕ್ಕದೇವಿ ದೇವಾಲಯಕ್ಕೆ ಸೇರಿದ ಜಮೀನು ಈಗಾಗಲೇ ಸರ್ವೆ ಅಳತೆ ಮಾಡಿದ್ದು, ಅದರ ಪರಿಶೀಲನೆ ನಡೆಸಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿದರು.

ಈ ವೇಳೆ ಸಮಿತಿ ಮುಖಂಡರಾದ ಉಂಡವಾಡಿ ಮಹದೇವು, ಮಹದೇವಪುರ ಕೃಷ್ಣ, ಶ್ರೀನಿವಾಸು, ಕಡತನಾಳು ಶ್ರೀಧರ್, ಬಾಬು, ಮಂಜುನಾಥ ಸೇರಿದಂತೆ ಇತರರು ಇದ್ದರು.

Share this article