ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರಗಳಲ್ಲಿ ಇಂಡಿಯನ್ ಆಯಿಲ್ ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ವಾಹನಗಳ ಪ್ರವೇಶ ನಿಷೇಧಿಸಿದ್ದನ್ನು ತೆರವುಗೊಳಿಸುವಂತೆ ಆಗ್ರಹಿಸಿ, ಐಒಸಿಎಲ್ ಹಾಗೂ ಎಚ್‌ಪಿಸಿಎಲ್ ಟ್ರಾನ್ಸ್‌ಪೋರ್ಟರ್ ಕಾಂಟ್ರ್ಯಾಕ್ಟರ್ಸ್ ಅಸೋಸಿಯೇಶನ್ ನಡೆಸುತ್ತಿರುವ ಧರಣಿ ಮುಂದುವರಿದಿದೆ.
ಸಾರ್ವಜನಿಕರ ಅಗತ್ಯ ವಸ್ತುಗಳಲ್ಲಿ ಸೇರಿರುವ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಅವಳಿ ನಗರ ಮಧ್ಯದ ರಾಯಾಪುರ ಬಳಿ ಭರ್ತಿ ಮಾಡಲಾಗುತ್ತಿದೆ. ಧಾರವಾಡ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಾದ ಬೆಳಗಾವಿ, ರಾಯಚೂರು, ಗದಗ, ಬಳ್ಳಾರಿ, ಕೊಪ್ಪಳ, ವಿಜಯಪುರ, ಉತ್ತರ ಕನ್ನಡ ಸೇರಿ ಇತರ ಕಡೆಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಆದರೆ, ಪ್ರವೇಶ ನಿಷೇಧದಿಂದ ಸಮಸ್ಯೆಯಾಗಿದೆ. ಕಂಪನಿಗಳಲ್ಲಿ ತೈಲ ಭರ್ತಿ ಆರಂಭವಾಗುವುದೇ ಬೆಳಗ್ಗೆ. ಈ ಅವಧಿಯಲ್ಲೇ ನಿಷೇಧ ಮಾಡಿದ್ದಾರೆ. ಇನ್ನು ಕಂಪನಿ ನಿಯಮ ಪ್ರಕಾರ ರಾತ್ರಿ ಅವಧಿಯಲ್ಲಿ ಟ್ಯಾಂಕರ್ ಓಡಿಸಿದರೆ ದಂಡ ಬೀಳಲಿದೆ. ಹೀಗಾಗಿ, ತೈಲ ಸರಬರಾಜು ಮಾಡುವುದೇ ಕಷ್ಟ ಸಾಧ್ಯವಾಗಿದೆ ಎಂದು ದೂರಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಿನಲ್ಲಿ ಟ್ಯಾಂಕರ್‌ಗಳ ಪ್ರವೇಶ ನಿಷೇಧಿಸಲಾಗಿದೆ. ನಿಷೇಧದಿಂದ ಟ್ಯಾಂಕರ್‌ಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಸಮಸ್ಯೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ಟ್ಯಾಂಕರ್‌ಗಳ ಸಂಚಾರ ಬಂದ್ ಮಾಡಿದ್ದೇವೆ. ಸರ್ಕಾರ ನಿಷೇಧ ತೆರವು ಮಾಡುವ ವರೆಗೂ ಧರಣಿ ನಡೆಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಸೋಸಿಯೇಶನ್‌ನ ಅಕ್ಷಯ ಪಟ್ಟಣಶೆಟ್ಟಿ, ಅರ್ಜುನ ಕುರಂದವಾಡ, ರಾಜು ನಾಯ್ಕರ, ರಾಕೇಶ ಪಟ್ಟಣಶೆಟ್ಟಿ, ಸಿದ್ರಯ್ಯ ಪಾದನಕಟ್ಟಿ, ರಫೀಕ್ ಕಲಕೇರಿ, ರಾಘವೇಂದ್ರ ಗೌಡರ, ಪಿ.ಬಿ. ಮಮದಾಪುರ ಇತರರು ಇದ್ದರು.
ತೈಲ ಸಮಸ್ಯೆ ಎದುರಾಗುವ ಸಾಧ್ಯತೆಕಳೆದ ಎರಡು ವರ್ಷದಿಂದ ನಾವು ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ. ಯಾರೊಬ್ಬರೂ ಸ್ಪಂದಿಸದ ಹಿನ್ನೆಲೆಯಲ್ಲಿ ತೈಲ ಲಾರಿ ಬಂದ್ ಮಾಡಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ಪೆಟ್ರೋಲ್ ಬಂಕ್‌ಗಳಲ್ಲಿ ಸದ್ಯಕ್ಕೆ ಈ ಮೊದಲು ವಿತರಣೆ ಮಾಡಿದ್ದ ತೈಲ ಇದ್ದು, ಸೋಮವಾರದಿಂದ ತೈಲ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ಸಮಸ್ಯೆಯಾದರೆ ತಾವು ಹೊಣೆಯಲ್ಲ ಎಂದು ಪ್ರತಿಭಟನಾಕರಾರು ಎಚ್ಚರಿಸಿದರು.