ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಈ ಪ್ರಮುಖ ರಸ್ತೆಗೆ, ಬ್ಯಾಂಕ್, ಶಾಲೆ, ಮಾರುಕಟ್ಟೆ ಬರಲಿವೆ. ಆದರೆ ಈ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಹೆದರುವಂತಾಗಿದೆ. ತುಸು ಆಯ ತಪ್ಪಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ಹಾಗಾಗಿ ಈ ರಸ್ತೆಯ ರಿಪೇರಿ ಮಾಡಬೇಕು ಎಂಬ ಮನೋಭಾವ ಇಲ್ಲಿಯವರೆಗೂ ನಗರಸಭೆಯವರಿಗೆ ಆಗಲಿ ಅಥವಾ ಜಿಲ್ಲಾಡಳಿತದವರಿಗೆ ಆಗಲಿ, ಬಾರದೇ ಇರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.
ಈ ರಸ್ತೆಯ ಅಕ್ಕಪಕ್ಕದಲ್ಲಿ ಅಲ್ಮೇರಾ ಪೀಠೋಪಕರಣ, ಹೋಲ್ ಸೇಲ್ ಅಂಗಡಿಗಳಿದ್ದು, ನೂರಾರು ಜನರು ವ್ಯಾಪಾರಕ್ಕಾಗಿ ಈ ರಸ್ತೆಗಳಿಗೆ ಬರುತ್ತಾರೆ. ವ್ಯಾಪಾರಕ್ಕೆ ಬರುವ ಸ್ಥಳಗಳನ್ನು ಸೌಂದರ್ಯಗೊಳಿಸುವುದು ನಗರದ ಅಭಿವೃದ್ಧಿಗೆ, ಸಹಕಾರಿಯಾಗಿದೆ. ತಕ್ಷಣ ರಸ್ತೆ ದುರಸ್ಥಿ ಮಾಡಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಡಾ.ಎಚ್.ಕೆ.ಎಸ್.ಸ್ವಾಮಿ ಮನವಿ ಮಾಡಿದ್ದಾರೆ.