ಪರಿಸರ ಸಂರಕ್ಷಣೆ ಜೀವನದ ಕ್ರಮವಾಗಲಿ: ಶಂಕರ

KannadaprabhaNewsNetwork | Published : Jun 8, 2024 12:32 AM

ಸಾರಾಂಶ

ಶಾಲಾ ಮಕ್ಕಳಿಗೆ ಗಿಡದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಾ, ಹಿಂದೆ ನಮ್ಮ ಹಿರಿಯರು ನೆಟ್ಟ ಮರದಿಂದ, ಈಗ ಹಣ್ಣು ತಿನ್ನುತ್ತಾ ಇದ್ದೇವೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸುವ ಹೊಣೆ ನಮ್ಮದಾಗಬೇಕು.

ಮುಂಡಗೋಡ: ವರ್ಷಕ್ಕೆ ಒಂದು ದಿನ ಮಾತ್ರ ಗಿಡ ನೆಟ್ಟು, ಪರಿಸರದ ಕುರಿತು ದೊಡ್ಡ ಪ್ರವಚನ ನೀಡದೇ ಪ್ರತಿದಿನ ಗಿಡ ನೆಡುವ, ನೆಟ್ಟ ಸಸಿ- ಗಿಡಗಳ ಪಾಲನೆ- ಪೋಷಣೆ, ಪ್ರಾಣಿ- ಪಕ್ಷಿ ಸಂಕುಲದ ಕಾಳಜಿ, ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಜೀವನದ ಕ್ರಮವಾಗಬೇಕು ಎಂದು ಉಪ ವಲಯ ಅರಣ್ಯಾಧಿಕಾರಿ ಶಂಕರ ಬಾಗೇವಾಡಿ ತಿಳಿಸಿದರು.

ತಮ್ಯಾನಕೊಪ್ಪದಲ್ಲಿ ಅರಣ್ಯ ಇಲಾಖೆ, ಗ್ರಾಮ ಅಭಿವೃದ್ಧಿ ಸಮಿತಿ, ಎಸ್‌ಡಿಎಂಸಿ ಹಾಗೂ ಲೊಯೋಲ ವಿಕಾಸ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ೫೦ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಭೂ- ಹಕ್ಕು ಹೋರಾಟ ಸಮಿತಿಯ ಕಾರ್ಯದರ್ಶಿ ಸುರೇಶ ರಾಠೋಡ ಶಾಲಾ ಮಕ್ಕಳಿಗೆ ಗಿಡದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಾ, ಹಿಂದೆ ನಮ್ಮ ಹಿರಿಯರು ನೆಟ್ಟ ಮರದಿಂದ, ಈಗ ಹಣ್ಣು ತಿನ್ನುತ್ತಾ ಇದ್ದೇವೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸುವ ಹೊಣೆ ನಮ್ಮದಾಗಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪದೀಪ್ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಪಯ ತುಕಾರಾಮ ತಟ್ಟಿಹಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ರವಿ ರಾಠೋಡ, ಹಿರಿಯರಾದ ರಾಮಚಂದ್ರ ರಾಠೊಡ, ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ಮಲ್ಲಮ್ಮ ನೀರಲಗಿ, ತೇಜಸ್ವಿನಿ, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಮಲ್ಲಮ್ಮ ನೀರಲಗಿ ನಿರೂಪಿಸಿದರು, ವಿರುಪಾಕ್ಷ ಕೊರವರ ಸ್ವಾಗತಿಸಿ, ವಂದಿಸಿದರು.ಕಾಳಿ ಹಿನ್ನೀರಿನಲ್ಲಿ ಪರಿಸರ ದಿನಾಚರಣೆ

ಕಾರವಾರ: ಕಾರವಾರ ಅರಣ್ಯ ವಿಭಾಗದ ಕೊಸ್ಟಲ್ ಮತ್ತು ಮರೈನ್ ಇಕೋ- ಸಿಸ್ಟಮ್ ಘಟಕದ ವತಿಯಿಂದ ಕಾಳಿ ನದಿ ಹಿನ್ನೀರಿನ ಕಿನ್ನರ ಗ್ರಾಮದ ನಡುಗಡ್ಡೆಯಲ್ಲಿ ವಿವಿಧ ಜಾತಿಯ ಕಾಂಡ್ಲಾ ಕೋಡು(Mangrove Propagules) ಮತ್ತು ಸಸ್ಯಗಳನ್ನು ನೆಡುವ ಮೂಲಕ ವಿನೂತನವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ. ಕಾಂಡ್ಲಾ ಪರಿಸರ ವ್ಯವಸ್ಥೆಯ ಮಹತ್ವ ಮತ್ತು 2024ನೇ ಸಾಲಿನ ವಿಶ್ವ ಪರಿಸರ ದಿನಾಚರಣೆ ಧ್ಯೇಯ ಭೂಮಿ ಮರುಸ್ಥಾಪನೆ, ಮರುಭೂಮಿಕರಣ ಹಾಗೂ ಬರ ಸ್ಥಿತಿಸ್ಥಾಪಕತ್ವ ಕುರಿತು ಮಾಹಿತಿ ನೀಡಿದರು.ಸ್ಥಳೀಯವಾಗಿ ಲಭ್ಯವಿರುವ ವಿವಿಧ ಜಾತಿಯ ಕಾಂಡ್ಲಾ ಕೋಡುಗಳ ಮತ್ತು ಸಸ್ಯಗಳ ಬಗ್ಗೆ ಮಾಹಿತಿ ನೀಡಿ ಅವುಗಳ ಪ್ರದರ್ಶನಕ್ಕೆ ಇಡಲಾಗಿತ್ತು. ಕಾಂಡ್ಲಾ ಸಸ್ಯಗಳನ್ನು ನೆಡುವ ಪ್ರಾತ್ಯಕ್ಷಿಕೆಯನ್ನು ತೋರಿಸಿ, ಅವುಗಳನ್ನು ನೆಡಲಾಯಿತು.

ನೌಕಾಸೇನೆಯ ವಜ್ರಕೋಶದ ಸಿಒ ಕ್ಯಾಪ್ಟನ್ ರವಿಕುಮಾರ ಸಿಂಗ್, ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ರಮೇಶ ರಾಥೋಡ್, ವಲಯ ಅರಣ್ಯಾಧಿಕಾರಿ ಗಜಾನನ ನಾಯ್ಕ, ಭವ್ಯ ನಾಯ್ಕ, ಉಪವಲಯ ಅರಣ್ಯಾಧಿಕಾರಿ ಪ್ರಕಾಶ ಯರಗಟ್ಟಿ, ಚಂದ್ರಶೇಖರ ಕಟ್ಟಿಮನಿ, ರಾಜೇಶ ನಾಯ್ಕ, ಮಲ್ಲಿಕಾರ್ಜುನ ಭಂಡಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ ಕೆ.ಸಿ., ವಲಯ ಅರಣ್ಯಾಧಿಕಾರಿ ಪ್ರಮೋದ ಬಿ. ಇದ್ದರು.

Share this article