ಪರಿಸರ, ಆರೋಗ್ಯ ಕಡೆಗಣನೆ ಸಲ್ಲ

KannadaprabhaNewsNetwork |  
Published : Jan 05, 2026, 02:30 AM IST
4ಕೆಪಿಎಲ್28 ೬೬ ನೇ ದಿನ - ವೈದ್ಯರ ಸಂಘ, ಇನ್ನರ್ ವ್ಹೀಲ್, ಎಸ್.ಎಸ್.ಕೆ ಸಮಾಜ  ಧರಣಿ | Kannada Prabha

ಸಾರಾಂಶ

ಕಾರ್ಖಾನೆಗಳಿಗೆ ಸ್ಥಳೀಯ ಜನರ ಆರೋಗ್ಯ, ಜೀವ ಇದಾವುದೂ ಮುಖ್ಯವೆನಿಸಿಲ್ಲ

ಕೊಪ್ಪಳ: ಕೊಪ್ಪಳದಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ಸವಾಲಾದ ನಿಗೂಢ ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ, ಇದರಿಂದ ಪಾರಾಗುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ (ಎನ್ಐಎಂಎ) ಅಧ್ಯಕ್ಷ ಡಾ. ಶಿವನಗೌಡ ಪಾಟೀಲ ಎಚ್ಚರಿಸಿದರು.

ಅವರು ನಗರಸಭೆ ಎದುರು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ೬೬ನೇ ದಿನದ ಧರಣಿ ಹೋರಾಟ ಬೆಂಬಲಿಸಿ ಮಾತನಾಡಿದರು.

ಇಲ್ಲಿ ಸ್ಥಾಪನೆಯಾಗಿರುವ ಕಾರ್ಖಾನೆಗಳಿಗೆ ಸ್ಥಳೀಯ ಜನರ ಆರೋಗ್ಯ, ಜೀವ ಇದಾವುದೂ ಮುಖ್ಯವೆನಿಸಿಲ್ಲ. ಇಲ್ಲಿ ಕಾಲಕಾಲದಿಂದ ಬದುಕು ಕಟ್ಟಿಕೊಂಡ ಜನರ ಜೀವ ಹೋದರೂ ನಮಗೇನು ಸಂಬಂಧ ಎನ್ನುವಂತೆ ಕಾರ್ಖಾನೆಗಳು ನಡೆದುಕೊಳ್ಳುತ್ತಿವೆ. ಕಂಪನಿಗಳು ಇಲ್ಲಿನ ಆರೋಗ್ಯ ಸಮಸ್ಯೆ ಮುಂದಿಟ್ಟುಕೊಂಡು ಬಲ್ಡೋಟ ಕಾರ್ಖಾನೆಯ ಬೃಹತ್ ಬಂಡವಾಳ ವಿರೋಧಿಸುವುದು ಎಷ್ಟು ಸರಿ ಎಂದು ಕೇಳುವ ಪ್ರಶ್ನೆಯೇ ಹಾಸ್ಯಾಸ್ಪದ ಮತ್ತು ಆಘಾತಕಾರಿಯಾಗಿದೆ. ಇಲ್ಲಿನ ಲಕ್ಷಗಟ್ಟಲೆ ಜನರ ಆರೋಗ್ಯ ಕೆಡಿಸಿ ದೇಶದ ಅಭಿವೃದ್ಧಿ,ರಾಜ್ಯದ ಅಭಿವೃದ್ಧಿ, ಜಿಎಸ್ಟಿ ಸಂಗ್ರಹ ಹೆಚ್ಚಾಗುತ್ತದೆ ಎಂದು ಸೋಸಿಯಲ್ ಮೀಡಿಯಾ ಮೂಲಕ ಹೇಳಿಸುವ ಬಲ್ಡೋಟ ಕಂಪನಿ ಅಸಂಖ್ಯೆಯ ಜನರ ಬಲಿ ಪಡೆಯಲು ಹಿಂದೇಟು ಹಾಕುವುದಿಲ್ಲವೆಂದು ಇದರಿಂದ ತಿಳಿಯುತ್ತಿದೆ. ಯಾವುದೇ ಅಭಿವೃದ್ಧಿ ಪರಿಸರ, ಆರೋಗ್ಯ ಕಡೆಗಣಿಸಿದರೆ ಅಂತಹ ಅಭಿವೃದ್ಧಿ ಯಾವತ್ತೂ ಶೂನ್ಯವಾಗಿರುತ್ತದೆ ಎಂದು ಪ್ರತಿಪಾದಿಸಿದರು.

ವೈದ್ಯ ಡಾ. ಮಂಜುನಾಥ ಸಜ್ಜನ್ ಮಾತನಾಡಿ, ಕೊಪ್ಪಳ ಶುದ್ಧ ಗಾಳಿಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ನಮ್ಮನ್ನೇ ಕುಹುಕ ಮಾಡುತ್ತಿರುವ ವರದಿ ಪ್ರಕಟ ಮಾಡಿಸಿ ನಮ್ಮ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಈಗ ಏರ್ ಕ್ವಾಲಿಟಿ ಇಂಡೆಕ್ಸ್ ಪ್ರಕಾರ ಕೊಪ್ಪಳ ೧೬೩ ಅಂಶ ದಾಟಿದೆ. ಇದು ರಾತ್ರಿ ೨೦೦-೩೦೦ ಎಕ್ಯೂಐ ಆಗುವ ಸಾಧ್ಯತೆ ಇದೆ. ಮನುಷ್ಯ ಉಸಿರಾಡುವ ಗಾಳಿ ಯುವುದೇ ಕಾರಣಕ್ಕೂ ೧೫೦ ಎಕ್ಯೂಐ ಮೀರಬಾರದು ನಾವು ಈಗ ಅಪಾಯದ ಜೋನ್ ನಲ್ಲಿದ್ದೇವೆ. ವೈದ್ಯರು ಕೂಡ ಇದೇ ವಾತಾವರಣದಲ್ಲಿ ಬದುಕಬೇಕಲ್ಲವೆ? ಸಾರಾಸಗಟು ಜನ ಗಂಭೀರ ಕಾಯಿಲೆಗೆ ತುತ್ತಾಗುತ್ತಿರುವುದು ಇಲ್ಲಿನ ಬೆರಳೆಣಿಕೆಯ ದವಾಖಾನೆ ಮತ್ತು ವೈದ್ಯರು ನೂರಾರು ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ ಎಂದರೆ ಏನರ್ಥ? ಇನ್ನೂ ಕೆಲವೇ ದಿನಗಳಲ್ಲಿ ತುಂಗಭದ್ರಾ ನೀರು ಮುಟ್ಟಲು ಸಹಿತ ಬರುವುದಿಲ್ಲ. ಈಗಾಗಲೇ ಈ ಕಾರ್ಖಾನೆಗಳ ತ್ಯಾಜ್ಯ, ಚರಂಡಿ, ವಿಷ ರಸಾಯನಿಕ ತ್ಯಾಜ್ಯ ನದಿಗೆ ಸೇರಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ವಿಷಾನಿಲ ಸೇವಿಸುವ ಯಾರು ಕೂಡ ಆರೋಗ್ಯದಿಂದ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಭಾಗ್ಯನಗರ ಎಸ್.ಎಸ್.ಕೆ ಮಹಿಳಾ ಮಂಡಳದ ಅಧ್ಯಕ್ಷೆ ವಿಜಯಲಕ್ಷ್ಮಿ ಪವಾರ ಮಾತನಾಡಿ, ನಾವು ಮಹಿಳೆಯರು ಮೌನವಾಗಿದ್ದೇವೆ ಎಂದರೆ ತಪ್ಪು. ಈ ಸಮಸ್ಯೆ ಗವಿಶ್ರೀಗಳು ಬೀದಿಗೆ ಬಂದು ಹೇಳಿದ ಮೇಲೆ ಅದಕ್ಕೆ ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದಾದರೆ ಹದ್ದಿನ ಕಣ್ಣಿಟ್ಟು ಗಮನಿಸುತ್ತಿದ್ದೇವೆ. ನಾವು ಪುನಃ ಗವಿಶ್ರೀಗಳನ್ನು ಭೇಟಿ ಮಾಡಿ ಮುಂದೆ ನಿಂತುಕೊಳ್ಳಿ ಸ್ವಾಮೀಜಿ ಮಹಿಳೆಯರು ಹೋರಾಟ ಗೆದ್ದು ತೋರಿಸುತ್ತೇವೆ ಎಂದು ಕೇಳುತ್ತೇವೆ. ಜಾತ್ರೆ ಮುಗಿಯುವದನ್ನು ಕಾಯುತ್ತಿದ್ದೇವೆ ಎಂದರು.

ಭಾಗ್ಯನಗರ ಇನ್ನರವ್ಹೀಲ್ ಅಧ್ಯಕ್ಷೆ ಸುನಿತಾ ಅಂಟಾಳಮರದ್ ಮಾತನಾಡಿದರು.

ಅಶೋಕ ವೃತ್ತದಲ್ಲಿ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಮೂರು ಸಂಘಟನೆಗಳ ಪ್ರಮುಖರು ಘೋಷಣೆ ಕೂಗಿ ಪ್ರತಿಭಟಿಸಿದವು. ಅಲ್ಲಿಂದ ಮೆರವಣಿಗೆ ಮೂಲಕ ಧರಣಿ ಸ್ಥಳದಲ್ಲಿ ಬಂದು ಸೇರಿಕೊಂಡು ಹೋರಾಟ ಬೆಂಬಲಿಸಿ ಮಾತನಾಡಿದರು.

ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ. ಎಂ. ಬಡಿಗೇರ, ಡಾ.ಸಿ. ಎಸ್. ಕರಮುಡಿ, ಡಾ. ಬಿ.ಎಲ್. ಕಲ್ಮಠ, ಡಾ. ಶ್ರೀನಿವಾಸ್, ಡಾ. ಕಸ್ತೂರಿ ವಿ. ಕರಮುಡಿ, ಎಸ್.ಎಸ್.ಕೆ ಸಂಘಟನೆಯ ಗೀತಾ ದಲಬಂಜನ್, ಪುಷ್ಪಲತಾ ಏಳುಬಾವಿ, ರಮಾ ಅಂಟಾಳಮರದ, ರಾಖಿ ಆರ್. ಮಗ್ಜಿ, ರೇಶ್ಮಾ ಎಸ್.ಎಚ್., ಸುಮನ್ ಎಸ್.ಡಿ., ರಾಧಾ ವಿ. ಕಾಟವಾ, ಶ್ವೇತಾ ಕಟವಟೆ, ರೇಖಾ ದಲಬಂಜನ್, ಜ್ಯೋತಿ ನಿರಂಜನ್, ಸುರೇಖಾ ಕಾಟವಾ, ಪದ್ಮಾವತಿ ಮೇಘರಾಜ, ಶ್ರೇಯಾ ದಲಬಂಜನ್, ಎಸ್. ಬಿ. ರಾಜೂರ, ಶಾಂತಯ್ಯ ಅಂಗಡಿ, ಜಿ.ಬಿ.ಪಾಟೀಲ್, ರಾಜಶೇಖರ ಏಳುಬಾವಿ, ಬಸವರಾಜ್ ನರೇಗಲ್, ಮಹಾದೇವಪ್ಪ ಎಸ್.ಮಾವಿನಮಡು, ಕವಿ ಈಶ್ವರ ಹತ್ತಿ ಇತರರು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ