ಕನ್ನಡಪ್ರಭ ವಾರ್ತೆ ನಾಪೋಕ್ಲುಪರಿಸರ, ಅನುಭವ, ಸಹವಾಸಗಳಿಂದ ಕಲಿತ ವಿದ್ಯೆ ಮಾತ್ರ ನಮಗೆ ಜೀವನ ಪರ್ಯಂತ ಉಪಯೋಗಕ್ಕೆ ಬರುತ್ತದೆ ಎಂದು ಕೊಡಗಿನ ಸೃಜನಶೀಲ ಲೇಖಕ, ಸಾಹಿತಿ ನಾಗೇಶ್ ಕಾಲೂರು ಹೇಳಿದರು.ಇಲ್ಲಿಗೆ ಸಮೀಪದ ಹೊದವಾಡ ಗ್ರಾಮದ ರಾಫೆಲ್ಸ್ ಇಂಟರ್‌ನ್ಯಾಷನಲ್ ಪಿಯು ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿಯಲ್ಲಿರುವ ಗಾಳಿ, ನೀರು, ಬೆಳಕು, ವಾತಾವರಣ ಎಲ್ಲವೂ ಜೀವಿಗಳ ಬದುಕಿಗೆ ಅತ್ಯವಶ್ಯಕ. ಪ್ರಕೃತಿಯ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡುವುದು ಶಿಕ್ಷಣದ ಒಂದು ಭಾಗವಾಗಿರಬೇಕು. ಇನ್ನೊಬ್ಬರನ್ನು ನೋಯಿಸದೆ ಇರುವಂತಹ ಗುಣಗಳನ್ನುಮಕ್ಕಳಿಗೆ ಹೇಳಿಕೊಡಬೇಕು ಎಂದ ಅವರು, ಕಲಿಕೆ ಎನ್ನುವುದು ನಿರಂತರ. ಪೋಷಕರಿಗೆ, ಅಧ್ಯಾಪಕರಿಗೆ ಗೌರವ ಕೊಡುವಂತಹ ತಿಳುವಳಿಕೆಯನ್ನು ಮಕ್ಕಳಿಗೆ ಕೊಡಬೇಕು. ನಮ್ಮ ಶರೀರ ಇರುವುದೇ ಇನ್ನೊಬ್ಬರಿಗೆ ಉಪಕಾರ ಮಾಡಲು ಎಂಬ ಅಂಶವನ್ನು ಮನವರಿಕೆ ಮಾಡಿಕೊಡಬೇಕೆಂದು ಕಿವಿಮಾತು ಹೇಳಿದರು.ಮಂಗಳೂರಿನ ಮೋಟಿವೇಶನ್ ಸ್ಪೀಕರ್ ರಫೀಕ್ ಮಾಸ್ಟರ್ ಮಾತನಾಡಿ, ಈ ದೇಶಕ್ಕೆ ಶಕ್ತಿ ಆಗಬೇಕಾದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಮೊಬೈಲ್ ಸಂಸ್ಕೃತಿಗೆ ಮಾರುಹೋಗಿ ಓದುವುದರಿಂದ ವಿಮುಖರಾಗುತ್ತಿದ್ದಾರೆ. ಮನೆಯಲ್ಲಿ ಹೆತ್ತವರು,
ಶಾಲೆಯಲ್ಲಿ ಶಿಕ್ಷಕರು, ಸಮಾಜದ ಸಂಘ-ಸಂಸ್ಥೆಗಳು ಮಕ್ಕಳು ಸಮಾಜಕ್ಕೆ ದಾರಿದೀಪವಾಗುವಂತೆ ಮಾರ್ಗದರ್ಶಕರಾಗಬೇಕು. ಮಕ್ಕಳು ಮನೆಗೆ ಬೆಳಕಾಗಬೇಕು. ಪುಸ್ತಕದ ಬಗ್ಗೆ ನಿಷ್ಠೆ ಇರಿಸಿ ಜ್ಞಾನ ಸಂಪಾದಿಸುವತ್ತ ಮಕ್ಕಳನ್ನುಪೋಷಕರು, ಶಿಕ್ಷಕರು, ಗುರುಹಿರಿಯರು ಪ್ರೇರೇಪಿಸಬೇಕು ಎಂದರು.ಈ ಸಂದರ್ಭ ಪಂಚಾಯಿತಿ ಪರಿಷತ್ ಅತ್ಯುತ್ತಮ ಪಿಡಿಒ ಪ್ರಶಸ್ತಿ ವಿಜೇತ ಹೊದ್ದೂರು ಪಿಡಿಒ ಎ.ಎ. ಅಬ್ದುಲ್ಲ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳ ಜ್ಞಾನ ಹೊರಹೊಮ್ಮಲು ಅವಕಾಶ ಕಲ್ಪಿಸಬೇಕು. ಪ್ರತಿಭೆ ಇರುವವರು ಯಾವುದೇ ಮೀಸಲಾತಿ ಇಲ್ಲದೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಲ್ಲರು. ಪ್ರತಿಭೆಗಳ ವಿಕಸನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಜನೆ ಹಾಗೂ ಕ್ರೀಡಾಕೂಟದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಮೆಹಬೂಬ್ ಸಾಬ್ ವಹಿಸಿದ್ದರು. ವೇದಿಕೆಯಲ್ಲಿ ನಾಪೋಕ್ಲು ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಂಘ ಅಧ್ಯಕ್ಷ ಹುಸೇನಾರ್ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಸೌಜನ್ಯ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲ ತನ್ವೀರ್ ಶಾಲಾ ವರದಿ ವಾಚಿಸಿದರು. ಶಿಕ್ಷಕಿ ರೇಖಾ ಅತಿಥಿ ನಾಗೇಶ್ ಅವರನ್ನು ಹಾಗೂ ಶಿಕ್ಷಕಿ ಸಮೀರ ಸನ್ಮಾನಿಸಲ್ಪಟ್ಟ ಹೊದ್ದೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅವರನ್ನು ಪರಿಚಯಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ವೇಷ ಭೂಷಣಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.