ಫ್ರೂಟ್ಸ್ ತಂತ್ರಾಂಶ ನೋಂದಣಿ: ರಾಜ್ಯಕ್ಕೆ ಜಿಲ್ಲೆ ನಂಬರ್ ಒನ್‌

KannadaprabhaNewsNetwork |  
Published : Dec 31, 2023, 01:30 AM IST
ಜಿಲ್ಲಾಧಿಕಾರಿ ಜಾನಕಿ ಕೆ.ಎ | Kannada Prabha

ಸಾರಾಂಶ

ಶೇ.83.99 ರೈತರ ಜಮೀನಿನ ವಿವರ ತಂತ್ರಾಂಶದಲ್ಲಿ ದಾಖಲೆಯಾಗಿದ್ದು 4,38,754 ರೈತರ ತಾಕುಗಳ ನೋಂದಣಿಯಾಗಿದೆ ಎಂದ ಡಿಸಿ ಜಾನಕಿ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೈತರ ಸಾಗುವಳಿ ಜಮೀನುಗಳ ವಿಸ್ತೀರ್ಣವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡುವ ಕಾರ್ಯದಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.

ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ಸಮೀಕ್ಷೆ ಆಧಾರದ ಮೇಲೆ ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ಇನ್ಪುಟ್ ಸಬ್ಸಿಡಿ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಎಲ್ಲಾ ಸರ್ವೆ ನಂಬರ್‌ ಸಾಗುವಳಿ ವಿಸ್ತೀರ್ಣವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ.

ಬೆಳೆನಷ್ಟ ಪರಿಹಾರವನ್ನು ನೇರ ನಗದು ವರ್ಗಾವಣೆ (ಡಿ.ಬಿ.ಟಿ.) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ರೈತರು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯೊಂದಿಗೆ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸುವುದು ಕೂಡ ಅತ್ಯವಶ್ಯವಾಗಿದೆ. ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಒಟ್ಟು 5,22,367 ರೈತರ ತಾಕುಗಳ ಪೈಕಿ 4,38,754 ರೈತರ ತಾಕುಗಳ ನೋಂದಣಿ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ 83,613 ಭೂ-ಹಿಡುವಳಿಗಳ ನೋಂದಣಿ ಕಾರ್ಯ ಫ್ರೂಟ್ಸ್ ತಂತ್ರಾಂಶದಲ್ಲಿ ಬಾಕಿ ಇದೆ.

ಬಾಗಲಕೋಟೆ ಜಿಲ್ಲೆಯು ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಜಮೀನಿನ ವಿವರಗಳನ್ನು ದಾಖಲಿಸುವಲ್ಲಿ (ಶೇ.83.99) ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ರೈತರು ಬೆಂಬಲ ಬೆಲೆ ಯೋಜನೆಗಾಗಿ, ಬ್ಯಾಂಕಿನಿಂದ ಬೆಳೆಸಾಲ ಪಡೆಯಲು, ಬೆಳೆವಿಮೆ ಪರಿಹಾರ ಪಡೆಯಲು, ಬೆಳೆ ಸಮೀಕ್ಷೆ ಮಾಹಿತಿಗಾಗಿ, ಬೆಳೆಹಾನಿ ಪರಿಹಾರಕ್ಕಾಗಿ, ಕೃಷಿ ಪರಿಕರ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಎಲ್ಲಾ ಭೂ-ಹಿಡುವಳಿಗಳ ಪಹಣಿ ಜೋಡಣೆ ಮಾಡುವುದು ಅತ್ಯವಶ್ಯಕವಾಗಿದೆ.

ರೈತರು, ಬೇರೆ ಕಡೆ ನೆಲೆಸಿರುವ ಜಮೀನು ಮಾಲೀಕರು, ಹೊಸದಾಗಿ ಭೂಮಿ ಖರೀದಿ ಮಾಡಿರುವ ರೈತರು ಮತ್ತು ಇತ್ತೀಚಿಗೆ ವಾರಸಾ ಹೊಂದಿರುವ ರೈತರು, ಜಮೀನು ದಾಖಲೆಗಳೊಂದಿಗೆ ಆಧಾರ್ ಕಾರ್ಡ್‌, ಜಾತಿ ದೃಢೀಕರಣ ಪತ್ರ, ಪೋಟೋ, ಬ್ಯಾಂಕ್ ಪಾಸ್ ಬುಕ್ ಮತ್ತು ಜಮೀನಿನ ಪಹಣಿ ಪತ್ರಿಕೆ ಇತ್ಯಾದಿ ವಿವರಗಳೊಂದಿಗೆ ಹತ್ತಿರದ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಸಂಖ್ಯೆ (ಎಪ್ಐಡಿ) ಪಡೆದುಕೊಳ್ಳಬೇಕು. ಈಗಾಗಲೇ ಎಫ್‌ ಐಡಿ ಹೊಂದಿದ ರೈತರು ತಮ್ಮ ಎಲ್ಲಾ ಭೂ-ಹಿಡುವಳಿಗಳ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ರೈತರಲ್ಲಿ ಮನವಿ ಮಾಡಿದ್ದಾರೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ