ಕನ್ನಡಪ್ರಭ ವಾರ್ತೆ ಅಥಣಿ: ರಾಜ್ಯದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಲಿ ಎಂಬ ಉದ್ದೇಶದಿಂದ ಕನ್ನಡಪ್ರಭ ದಿನಪತ್ರಿಕೆ ನಡೆಸುತ್ತಿರುವ ಕರ್ನಾಟಕ ಅರಣ್ಯ- ವನ್ಯಜೀವಿ ವಿಷಯ ಕುರಿತ ಚಿತ್ರಕಲೆ ಸ್ಪರ್ಧೆ ಪರಿಸರ ಕಾಳಜಿ ಮೂಡಿಸಲು ಸಹಕಾರಿಯಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ರಾಕೇಶ್ ಅರ್ಜುನವಾಡ ಹೇಳಿದರು.ಪಟ್ಟಣದ ಶಂಕರ ನಗರದ ಅರಣ್ಯ ಇಲಾಖೆಯ ಮಕ್ಕಳ ಉದ್ಯಾನವನದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಯನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು. ಪರಿಸರ ಮತ್ತು ಜೀವಸಂಕುಲ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅರಣ್ಯ ಸಂಪತ್ತು ಇದ್ದರೆ ಕಾಲಕ್ಕೆ ತಕ್ಕಂತೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲಗಳು ಬರಲಿವೆ. ಅರಣ್ಯ ಮತ್ತು ವನ್ಯಜೀವಿಗಳು ನಮ್ಮ ದೇಶದ ಸಂಪತ್ತುಗಳಾಗಿವೆ. ವನ್ಯಜೀವಿಗಳು, ಅರಣ್ಯ ಸಂಪತ್ತನ್ನು ಪ್ರೀತಿಸೋಣ, ರಕ್ಷಿಸೋಣ ಎಂದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಉದಯ ಮಾಕಾಣಿ, ಕನ್ನಡಪ್ರಭ ವರದಿಗಾರ ಅಣ್ಣಾಸಾಬ ತೆಲಸoಗ, ಮಾರುತಿ ದುಮಾಳೆ, ಜಬ್ಬಾರ ಚಿಂಚಲಿ, ಯಾಶೀನ್ ಝರೆ ಸೇರಿ ಇತರರು ಉಪಸ್ಥಿತರಿದ್ದರು.