ಕಾರವಾರ: ಉ.ಕ. ಜಿಲ್ಲೆ ಅಂಕೋಲಾ ತಾಲೂಕಿನ ಕೇಣಿ ಬಂದರು ನಿರ್ಮಾಣ ಯೋಜನೆ ಕೈಬಿಡಲು ಜನತೆ ನಡೆಸುತ್ತಿರುವ ಬೃಹತ್ ಜನಾಂದೋಲನಕ್ಕೆ ಮಾನ್ಯತೆ ನೀಡಬೇಕು ಎಂದು ವೃಕ್ಷಲಕ್ಷ ಆಂದೋಲನ ಸರ್ಕಾರವನ್ನು ಒತ್ತಾಯಿಸಿದೆ.
ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಈ ಕುರಿತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.ಕೇಣಿ ಬಂದರು ನಿರ್ಮಾಣ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಖಾಸಗಿ ಕಂಪನಿಗೆ ಒಪ್ಪಿಗೆ ನೀಡಿದೆ. ಸಮುದ್ರ ತೀರದಿಂದ ೧೦ ಕಿಮೀ ಸಮುದ್ರದಲ್ಲಿ ಭಾರೀ ಬಂದರು ನಿರ್ಮಾಣದಿಂದ ೧೦ ಸಾವಿರ ಮೀನುಗಾರರ ಬದುಕಿಗೆ ಸಂಚಕಾರ ಬರಲಿದೆ. ಒಂದು ವರ್ಷದಿಂದ ಅಂಕೋಲಾದಲ್ಲಿ ಜನಾಂದೋಲನ ನಡೆದಿದೆ. ಸಾರ್ವಜನಿಕ ಅಹವಾಲು ಸಭೆಯಲ್ಲಿ, ಧರಣಿ, ಮೆರವಣಿಗಳಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸ್ಥಳೀಯ ರೈತರು, ಮೀನುಗಾರರು, ನಾಗರಿಕರು ಭಾಗವಹಿಸಿದ್ದಾರೆ. ಪ್ರಜಾಪ್ರಭುತ್ವ ಸಂವಿಧಾನ, ಕಾನೂನುಗಳ ಭಾರೀ ಉಲ್ಲಂಘನೆ ಮಾಡಿ ಸರ್ಕಾರ ಬಂದರು ಯೋಜನೆ ಜಾರಿ ಮಾಡಬೇಕೆ ಎಂಬ ಪ್ರಶ್ನೆಗಳನ್ನು ಹಲವು ಗಣ್ಯರು ಎತ್ತಿದ್ದಾರೆ.
ಸಾರ್ವಜನಿಕ ಅಹವಾಲು ಸಭೆ ಪರಿಸರ ಕಾಯಿದೆ ಅಡಿಯಲ್ಲಿ ನಡೆದರೂ ಇದೊಂದು ಕೇಣಿ ಬಂದರು ಯೋಜನೆ ರದ್ದು ಕೋರಿ ವ್ಯಕ್ತವಾದ ಜನಾಭಿಪ್ರಾಯ ಸಂಗ್ರಹ ಸಭೆಯೇ ಆಗಿತ್ತು ಎಂಬುದನ್ನು ಜಿಲ್ಲಾಧಿಕಾರಿ ದಾಖಲೆ ಸಹಿತ ಸರ್ಕಾರಕ್ಕೆ ಹೇಳಬಹುದಿತ್ತು.ಕೇಣಿ ಸಮುದ್ರ ತೀರದಲ್ಲಿ ಕರಾವಳಿ ಪರಿಸರ ನಿಯಂತ್ರಣ (ಸಿಆರ್‌ಝಡ್) ಕಾಯಿದೆ ತೀವ್ರ ಭಂಗ ಆಗುವುದನ್ನು ಕರಾವಳಿ ನಿಯಂತ್ರಣ ಪ್ರಾಧಿಕಾರ ಏಕೆ ಹೇಳುತ್ತಿಲ್ಲ? ಗ್ರಾಪಂಗಳು ಯೋಜನೆ ವಿರೋಧಿಸಿ ಕೈಗೊಂಡ ನಿರ್ಣಯ ಸರ್ಕಾರಕ್ಕೆ ತಲುಪಿಲ್ಲವೇ? ಜಿಲ್ಲೆಯ ಜನಪ್ರತಿನಿಧಿಗಳು ಮೀನುಗಾರರ ಪರವಾಗಿ ವಕಾಲತ್ತು ಏಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗಳನ್ನೂ ಅವರು ಎತ್ತಿದ್ದಾರೆ.
ಅಹಿಂಸಾತ್ಮಕವಾಗಿ ಜನತೆ ಪ್ರತಿಭಟಿಸುತ್ತಿದ್ದರೂ ಸರ್ಕಾರ ಏಕೆ ಗಮನಿಸುತ್ತಿಲ್ಲ? ರಾಜ್ಯ ಜೀವ ವೈವಿಧ್ಯ ಮಂಡಳಿಗೆ ಕೇಣಿ ಬಂದರು ನಿರ್ಮಾಣ ಯೋಜನೆ ಬಗ್ಗೆ ಮಾಹಿತಿ ಇದೆಯೆ ಎಂಬ ಪ್ರಶ್ನೆಗಳನ್ನೂ ಪರಿಸರ ತಜ್ಞರು ಎತ್ತಿದ್ದಾರೆ.ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಪರಿಸರ ವಿಜ್ಞಾನಿಗಳಾದ ಡಾ. ಟಿ.ವಿ. ರಾಮಚಂದ್ರ, ಡಾ. ಸುಭಾಸ್ ಚಂದ್ರನ್, ಡಾ. ಬಿ.ಎಂ. ಕುಮಾರ ಸ್ವಾಮಿ, ಡಾ. ಬಾಲಚಂದ್ರ ಸಾಯಿಮನೆ, ಡಾ. ವಿ.ಎನ್. ನಾಯಕ ಮತ್ತಿತರರು ಸರ್ಕಾರದ ಮುಂದೆ ಈ ಮೇಲಿನ ಹಲವು ಗಂಭೀರ ವಿಷಯಗಳನ್ನು ಮಂಡಿಸಿದ್ದಾರೆ.