ಮದ್ದೂರು: ಪರಿಸರ ರಕ್ಷಣೆ ಕೇವಲ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಸಮಾಜ ಸೇವಾ ಸಂಸ್ಥೆಗಳು ಒಗ್ಗೂಡಿ ಕಾಳಜಿ ವಹಿಸಬೇಕು ಎಂದು ಪಟ್ಟಣದ ಜೆಎಂಎಫ್ ನ್ಯಾಯಾಲಯದ ಒಂದನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಎಂ.ಪಾರ್ವತಿ ಹೇಳಿದರು.
ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರೂ ಪ್ರಕೃತಿಗೆ ಅಧೀನರಾಗಿ ಬದುಕು ನಡೆಸುತ್ತಿದ್ದೇವೆ. ಬದುಕಿಗೆ ಒಂದು ಅರ್ಥ ಬರಬೇಕಾದರೆ ಎಲ್ಲರೂ ಪರಿಸರದ ಬಗ್ಗೆ ಕಾಳಜಿ ಹೊಂದಿದ್ದರೆ ಮಾತ್ರ ಆರೋಗ್ಯವಂತ ಜೀವನ ಜೀವನ ನಡೆಸಲು ಸಾಧ್ಯವಿದೆ ಎಂದರು.
ಎರಡನೇ ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ಗೋಪಾಲಕೃಷ್ಣ ಮಾತನಾಡಿ, ಸ್ವಚ್ಛ ಗಾಳಿ, ಸ್ವಚ್ಛ ಸಮಾಜ ಇರಬೇಕಾದರೆ ನಮ್ಮ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸಲು ಹೆಚ್ಚಿನ ಆದ್ಯತೆ ನೀಡಬೇಕು. ಪರಿಸರ ನಮಗೆ ಎಲ್ಲವನ್ನೂ ಕೊಟ್ಟಿದೆ, ನಾವು ಪರಿಸರಕ್ಕೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದನ್ನು ಅರಿತು ಪರಿಸರವನ್ನು ಉಳಿಸಬೇಕು ಎಂಬ ಸತ್ಯವನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಸ್ಮಿತಾ ರಾಮು ಪರಿಸರದ ಮಹತ್ವ ಕುರಿತು ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಂ ಡೇವಿಡ್, ಕಪನಿ ನಂಜೇಶ್ವರ, ಕೈಗಾರಿಕಾ ತರಬೇತಿ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಬಾಬು, ಉಪನ್ಯಾಸಕರಾದ ಶಿವಲಿಂಗಯ್ಯ, ಪ್ರತಾಪ್ ಚಂದ್ರ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಜೆ. ಸುಮಂತ್, ವಲಯ ಅರಣ್ಯಾಧಿಕಾರಿ ಗವಿಯಪ್ಪ, ರೋಟರಿ ಸಂಸ್ಥೆ ಅಧ್ಯಕ್ಷ ಚನ್ನಂಕೇಗೌಡ, ಮಾಜಿ ಅಧ್ಯಕ್ಷ ಹೊನ್ನೇಗೌಡ, ಬಿಂದಾಸ್ ಶ್ರೀನಿವಾಸ್ ಹಾಗೂ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.