ತಿಪಟೂರು: ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸುವ ಮೂಲಕ ಸ್ವಚ್ಚತೆಯನ್ನು ಕಾಪಾಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ. ದೀಪಾ ಹೇಳಿದರು.
ಆಧುನೀಕತೆ ಹೆಸರಿನಲ್ಲಿ ಭೂಮಿ ರಕ್ಷಣೆ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಅಂತರ್ಜಲ ಮಟ್ಟ ಕುಸಿದು ಬರಗಾಲ ಸೃಷ್ಟಿಯಾಗಿದೆ. ನಾವೆಲ್ಲರೂ ನೀರನ್ನು ಮಿತವಾಗಿ ಬಳಸಬೇಕು. ಅಲ್ಲದೆ ನೀರನ್ನು ಭೂಮಿಯಲ್ಲಿ ಇಂಗಿಸುವಂತೆ ಮಾಡಬೇಕು. ಆಗ ಮಾತ್ರ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಇಂತಹ ಉದ್ಯಾನವನಗಳ ಸಂರಕ್ಷಣೆಯನ್ನು ಮಾಡಬೇಕೆಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ನಾವು ಭೂಮಿಯ ಮೇಲಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತೇವೆ. ಆದರೆ ಭೂಮಿ ರಕ್ಷಣೆಯ ಬಗ್ಗೆ ಗಮನಹರಿಸುತ್ತಿಲ್ಲ. ಪ್ಲಾಸ್ಟಿಕ್‌ನಂತಹ ತ್ಯಾಜ್ಯ ವಸ್ತುಗಳ ಬಳಕೆಯ ಪರಿಣಾಮ ಪರಿಸರ ಹಾಳಾಗುತ್ತಿದೆ. ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಿಸಬೇಕು ಎಂದರು.ವಕೀಲ ಕೆ.ಎಸ್. ಮಮತಾ, ನಗರಸಭೆ ಸಿಬ್ಬಂದಿ ವಿದ್ಯಾ, ಪೌರಕಾರ್ಮಿಕರು ಭಾಗವಹಿಸಿದ್ದರು.