ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಇಪಿಎಫ್‌ಓ ಸಹಕಾರ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಬ್ಯಾಂಕ್ ಕಚೇರಿ ಹಾಗೂ ಆರೋಪಿತ ಅಧಿಕಾರಿಗಳ ಮನೆಗಳ ಮೇಲೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದಾರೆ.ಮಂಗಳವಾರ ರಿಚ್ಮಂಡ್ ಸರ್ಕಲ್ ಸಮೀಪದ ಬ್ಯಾಂಕ್‌ನ ಕಚೇರಿ, ರಾಜರಾಜೇಶ್ವರಿ ನಗರ, ಜಯನಗರ, ಜೆ.ಪಿ.ನಗರ ಹಾಗೂ ಅಂಜನಾಪುರದಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದೆ. ಈ ವೇಳೆ ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಂದೆಡೆ ತಲೆಮರೆಸಿಕೊಂಡಿರುವ ಆರೋಪಗಳಿಗೆ ಹುಡುಕಾಟ ಚುರುಕುಗೊಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಹೂಡಿಕೆ ಹೆಸರಿನಲ್ಲಿ 70 ರಿಂದ 75 ಕೋಟಿ ರು ವರೆಗೆ ಗ್ರಾಹಕರ ಹಣವನ್ನು ಬ್ಯಾಂಕ್‌ನ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ವಂಚನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಬ್ಯಾಂಕ್‌ನ ಕಾರ್ಯನಿರ್ವಾಹಕ ಅಧಿಕಾರಿ ಬಂಧನವಾಗಿದ್ದು, ತಪ್ಪಿಸಿಕೊಂಡಿರುವ ಲೆಕ್ಕಧಿಕಾರಿ ಸೇರಿದಂತೆ ಇತರರ ಪತ್ತೆ ಪೊಲೀಸರು ಶೋಧ ನಡೆಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು, ಬ್ಯಾಂಕ್‌ನ ಕಚೇರಿ ಹಾಗೂ ಆರೋಪಿಗಳ ಮನೆಗಳಲ್ಲಿ ಪರಿಶೀಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ....ಬಾಕ್ಸ್...ಸಿಐಡಿ ವರ್ಗಾವಣೆ?
ಇಪಿಎಫ್‌ಓ ಸಹಕಾರ ಬ್ಯಾಂಕ್ ವಂಚನೆ ಪ್ರಕರಣ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವರ್ಗಾವಣೆಯಾಗಲಿದೆ ಎಂದು ತಿಳಿದು ಬಂದಿದೆ. ಈ ಬ್ಯಾಂಕ್‌ನಲ್ಲಿ ಸುಮಾರು 70 ಕೋಟಿ ರುನಷ್ಟು ಆರ್ಥಿಕ ಅಪರಾಧ ವಂಚನೆ ನಡೆದಿದೆ. ನಿಯಮಾನುಸಾರ 5 ಕೋಟಿಗಿಂತ ಮಿಗಿಲಾದ ಆರ್ಥಿಕ ಅಪರಾಧ ಕೃತ್ಯಗಳು ಸಿಐಡಿ ವ್ಯಾಪ್ತಿಗೆ ಬರಲಿದೆ. ಅಂತೆಯೇ ಈ ಪ್ರಕರಣವು ಸಹ ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.