ಸಮಾನತೆ, ಭ್ರಾತೃತ್ವ ಭಾವನೆಯಿಂದ ನೋಡುವುದು ತುಷ್ಟೀಕರಣವೇ?: ಪಾಟೀಲ

KannadaprabhaNewsNetwork | Published : Nov 1, 2024 12:02 AM

ಸಾರಾಂಶ

ವಕ್ಫ್‌ ವಿಚಾರವನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಕೆ ಮಾಡುತ್ತಿದ್ದು, ಚುನಾವಣೆ ಬಂದಾಗ ಇಂತಹ ವಿಚಾರಗಳನ್ನು ಮುನ್ನಲೆಗೆ ತಂದು ಧರ್ಮಾಂಧತೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಹುಬ್ಬಳ್ಳಿ:

ತುಷ್ಟೀಕರಣ ಎಂದರೇನು? ನಮ್ಮ ಸರ್ಕಾರ ಎಲ್ಲರನ್ನು ಸಮಾನತೆಯಿಂದ ಕಾಣುತ್ತಿದ್ದು, ಭ್ರಾತೃತ್ವ ಭಾವನೆಯಿಂದ ನೋಡುವುದು ತುಷ್ಟೀಕರಣ ರಾಜಕಾರಣವೇ? ಎಂದು ಸಚಿವ ಎಚ್‌.ಕೆ. ಪಾಟೀಲ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ಮಾಡುತ್ತಿದೆ ಎಂಬ ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದರು. ತುಷ್ಟೀಕರಣ ಮಾಡುವಂತಹ ಕೆಲಸ ನಾವೇನು ಮಾಡಿದ್ದೇವೆ? ಬಿಜೆಪಿಯವರು ಮೊದಲು ಜಾತಿ, ಕೋಮುವಾದ ಬಿಟ್ಟು ಹೊರಗೆ ಬಂದರೆ ರಾಷ್ಟ್ರಕ್ಕೆ ಕಲ್ಯಾಣವಾಗುತ್ತದೆ ಎಂದರು.

ವಕ್ಫ್ ರಾಜಕೀಯಕ್ಕೆ ಬಳಕೆ:

ವಕ್ಫ್‌ ವಿಚಾರವನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಕೆ ಮಾಡುತ್ತಿದ್ದು, ಚುನಾವಣೆ ಬಂದಾಗ ಇಂತಹ ವಿಚಾರಗಳನ್ನು ಮುನ್ನಲೆಗೆ ತಂದು ಧರ್ಮಾಂಧತೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ನೋಟಿಸ್ ಕೊಟ್ಟ ತಕ್ಷಣವೇ ಜಮೀನು ವಕ್ಫ್‌ ಬೋರ್ಡ್‌ಗೆ ಸೇರಿ ಬಿಡುತ್ತಾ? ದೇಶದಲ್ಲಿ ಕಾನೂನು ಇಲ್ಲವಾ? ಅಣ್ಣ- ತಮ್ಮಂದಿರು ಬೇರೆ ಬೇರೆಯಾದರೆ, ಪಹಣಿ ಪತ್ರ ಆಗಬೇಕೆಂದರೆ 6 ತಿಂಗಳು ಬೇಕು. ಹೀಗಿದ್ದಾಗ್ಯೂ ಈ ವಿಚಾರದಲ್ಲಿ ಜನರನ್ನು ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಕಾನೂನು ಪದ್ಧತಿ ಇದೆ. ಯಾರಿಗೇ ಅನ್ಯಾಯವಾದರೂ ಕಾನೂನಿಗೆ ಅದನ್ನು ಸರಿಪಡಿಸುವ ಶಕ್ತಿಯಿದೆ ಎಂದು ಪಾಟೀಲ್‌ ಹೇಳಿದರು.

ವಕ್ಫ್‌ ವಿಚಾರವಾಗಿ ಹಾವೇರಿಯಲ್ಲಿ ನಡೆದ ಗಲಾಟೆ ವಿಚಾರದ ಬಗ್ಗೆ ಮಾಹಿತಿ ಇಲ್ಲ. ಅಶಾಂತಿಗೆ ಅವಕಾಶ ಕೊಡದ ಹಾಗೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ. ಅಲ್ಲದೇ, ಗೃಹ ಸಚಿವರು ಈ ಬಗ್ಗೆ ಗಮನ ಹರಿಸುತ್ತಾರೆ ಎಂದರು.

ಬಿಜೆಪಿದು ಕನಸು ಮಾತ್ರ:

ಸರ್ಕಾರ ಬೀಳಿಸುವ ಪ್ರಯತ್ನದಲ್ಲಿ ಬಿಜೆಪಿಗರು ತೊಡಗಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರ ಬಿದ್ದು ಹೋಗುತ್ತದೆ, ಇದಕ್ಕಾಗಿ ಸಾವಿರ ಕೋಟಿ ರುಪಾಯಿ ಸಂಗ್ರಹ ಮಾಡಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಅವರ ಕನಸು ಮಾತ್ರ. ನಮ್ಮ ಸರ್ಕಾರ ಜನಾಶೀರ್ವಾದಿಂದ ಬಂದಿದ್ದು, ಯಾವುದೇ ಕಾರಣಕ್ಕೂ ಬೀಳಲ್ಲ ಎಂದು ಹೇಳಿದರು.

ಶಕ್ತಿ ಯೋಜನೆ ಕೈಬಿಡಲ್ಲ:

ಶಕ್ತಿ ಯೋಜನೆ ವಿಚಾರವಾಗಿ ಮಾತನಾಡಿದ ಅವರು, ನಾವು ಶಕ್ತಿ ಯೋಜನೆ ಕೈಬಿಡುವ ಪ್ರಶ್ನೆಯೇ ಇಲ್ಲ. ಅದೊಂದು ಜನಪ್ರಿಯ ಯೋಜನೆಯಾಗಿದ್ದು, ಉಳಿದ ಯೋಜನೆಗಳನ್ನು ಕೈಬಿಡಲ್ಲ, ನಮ್ಮ ಖಜಾನೆ ಖಾಲಿಯಾಗಿಲ್ಲ. ಬಸ್ ಖರೀದಿಗೆ ದುಡ್ಡಿಲ್ಲ ಎಂದು ಹೇಳಿದ್ದು ಯಾರು? ಸತತವಾಗಿ ಹೊಸ ಬಸ್‌ಗಳನ್ನು ಖರೀದಿ ಮಾಡಿ ರಿಬ್ಬನ್ ಕಟ್ ಮಾಡುತ್ತಿರುವುದು ಅವರಿಗೆ ಗೊತ್ತಿಲ್ಲವೇ? ಸುಳ್ಳು ಹೇಳಿ ಜನರ ಮನಸ್ಸು ಕದಿಯಲು ಸಾಧ್ಯವಿಲ್ಲ ಎಂದು ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.

Share this article