ಸಮಾಜದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಾಗಲಿ: ಶಾಂತಲಿಂಗ ಶ್ರೀಗಳು

KannadaprabhaNewsNetwork |  
Published : Nov 19, 2024, 12:48 AM IST
(18ಎನ್.ಆರ್.ಡಿ4 ಶಿವಾನುಭವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳುನ್ನು ಶಾಂತಲಿಂಗ ಶ್ರೀಗಳು ಸನ್ಮಾಸುತ್ತಿದ್ದಾರೆ.)  | Kannada Prabha

ಸಾರಾಂಶ

ಸಮಾನ ಶೈಕ್ಷಣಿಕ ಪ್ರವೇಶ ಉತ್ತೇಜಿಸುವ ಮಹತ್ವವನ್ನು ಬಲಪಡಿಸಬೇಕು. ಆ ನಿಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ಇನ್ನೂ ಹೆಚ್ಚು ಬಲಪಡಿಸಬೇಕು ಎಂದು ಶಾಂತಲಿಂಗ ಶ್ರೀಗಳು ಹೇಳಿದರು.

ನರಗುಂದ: ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯ ಕನಸು ನನಸಾಗುತ್ತಿಲ್ಲ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅವರಲ್ಲಿ ಸಾತ್ವಿಕ ಗುಣಗಳನ್ನು ಬಿತ್ತಬೇಕು. ಹಿಂದುಳಿದ ಪ್ರದೇಶಗಳಲ್ಲಿ ಅನೇಕ ಮಕ್ಕಳು ಇನ್ನೂ ಸರಿಯಾದ ಶಾಲಾ ಅವಕಾಶಗಳನ್ನು ಹೊಂದಿಲ್ಲ. ಸಮಾನ ಶೈಕ್ಷಣಿಕ ಪ್ರವೇಶ ಉತ್ತೇಜಿಸುವ ಮಹತ್ವವನ್ನು ಬಲಪಡಿಸಬೇಕು. ಆ ನಿಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ಇನ್ನೂ ಹೆಚ್ಚು ಬಲಪಡಿಸಬೇಕು ಎಂದು ಶಾಂತಲಿಂಗ ಶ್ರೀಗಳು ಹೇಳಿದರು. ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ಶ್ರೀ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 364ನೇ ಮಾಸಿಕ ಶಿವಾನುಭವ ಹಾಗೂ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಮಕ್ಕಳ ದಿನ ಕೇವಲ ಆಚರಣೆಗಲ್ಲ. ಅದು ಮಗುವಿಗೆ ಅಮೂಲ್ಯವಾದ ಜೀವನ ಪಾಠಗಳನ್ನು ನೀಡಲು ಸೂಕ್ತವಾದ ಸಂದರ್ಭವಾಗಿದೆ. ಅವರ ಭವಿಷ್ಯಕ್ಕಾಗಿ ಬಲವಾದ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಅಗತ್ಯ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಅವರಿಗೆ ಕಲಿಸಬೇಕಾಗಿರುವುದು ಪ್ರತಿಯೊಬ್ಬರ ಆದ್ಯಕರ್ತವ್ಯವಾಗಿದೆ ಎಂದರು. ಪುರಸಭೆ ಸದಸ್ಯ ಅಪ್ಪಣ್ಣ ನಾಯ್ಕರ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹೀಗಾಗಿ, ಪಾಲಕರು ಮಕ್ಕಳಿಗೆ ಸೂಕ್ತ ನಿರ್ದೇಶನ ಮಾಡಿ ಅವರನ್ನು ಸತ್ಪ್ರಜೆಗಳನ್ನಾಗಿಸುವಂತೆ ಮಾರ್ಗದರ್ಶನ ಮಾಡಬೇಕಾಗಿದೆ. ಇತ್ತೀಚಿಗೆ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಅವರಿಗೆ ಮೊಬೈಲ್ ಗೀಳನ್ನು ತಪ್ಪಿಸಿ ಅವರಿಗೆ ಪುಸ್ತಕದ ಮಹತ್ವವನ್ನು ತಿಳಿಸಿಕೊಡಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸರಕಾರಿ ಪ್ರೌಢ ಶಾಲೆಯ ದೇವಕ್ಕ ಕಲಾರಿ ಹಾಗೂ ಮೊರಾರ್ಜಿ ವಸತಿ ಶಾಲೆಯ ಸಂದೀಪ ಕಿತ್ತೂರ ಅವರನ್ನು ಶ್ರೀಮಠದಿಂದ ಶ್ರೀಗಳು ಅಭಿನಂದಿಸಿದರು.

ವೇದಿಕೆ ಮೇಲೆ ರತ್ನಕ್ಕ ಶಿಳ್ಳಿನ, ವಿಜಯಕುಮಾರ ಮಾಳವಾಡ, ಲಕ್ಷ್ಮೀಬಾಯಿ ಪಾಟೀಲ, ಜ್ಯೋತಿ ಯಳ್ಳೂರ, ಮಂಗಳಾ ಪಾಟೀಲ, ಸಂಗನಗೌಡ ಪಾಟೀಲ, ಜಗದೀಶ ಕೊಣ್ಣೂರ, ಸುಕನ್ಯಾ ಸಾಲಿ, ನಾಗವ್ವ ಕುಳಗೇರಿ, ಸರಸ್ವತಿ ಹಿರೇಮಠ, ಮಹಾಂತೇಶ ಹಿರೇಮಠ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''