ಪ್ರೊ.ಎಂ. ವೆಂಕಟೇಶ್ವರಲು ಅಭಿಮತ । ಸಾಕ್ಷ್ಯಚಿತ್ರದ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ
ಸಮಾಜದ ಅನಿಷ್ಠ ಆಚರಣೆಯಾದ ದೇವದಾಸಿ ಪದ್ಧತಿ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ. ಅಧ್ಯಯನ, ಸಂಶೋಧನೆಗಳೊಂದಿಗೆ ಈ ಪದ್ಧತಿಯನ್ನು ಅವಲೋಕಿಸಿ, ಸಮಸ್ಯೆಗಳ ಸ್ವರೂಪ ಅರಿತು, ಪರಿಹಾರ ಒದಗಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಾಸ್ತವತೆಯ ಅರಿವನ್ನು ಮೂಡಿಸುವ ಇಂಥ ಸಂಶೋಧನಾಧಾರಿತ ಸಾಕ್ಷ್ಯಚಿತ್ರಗಳು ತಳ ಸಮುದಾಯದ ನೋವನ್ನು ಹೊರಹಾಕುತ್ತವೆ. ಅನಿಷ್ಠ ಪದ್ಧತಿಗಳ ನಿರ್ಮೂಲನೆಯಲ್ಲಿ ಸರ್ಕಾರದ ಜೊತೆ ವಿದ್ಯಾವಂತ ಸಮಾಜವೂ ಅರಿವು ಮೂಡಿಸುವಲ್ಲಿ ಕೈಜೋಡಿಸಬೇಕು. ಜ್ಞಾನಾರ್ಜನೆಗೆ ಪೂರಕವಾದ ಸಮಾಜ ನಿರ್ಮಿಸಿದಾಗ ನಕಾರಾತ್ಮಕ ಅಂಶಗಳನ್ನು ತೊರೆದು ಜೀವಿಸಬಹುದು ಎಂದರು.
21 ನೆಯ ಜ್ಞಾನಾರ್ಜನೆಯ ಶತಮಾನದಲ್ಲಿ ಸಂಶೋಧನೆ, ಆವಿಷ್ಕಾರಗಳಾಗಬೇಕು. ಮೂಢನಂಬಿಕೆಗಳನ್ನು ಶಿಕ್ಷಣನಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕು ಎಂದು ಹೇಳಿದರು.
ದೇವದಾಸಿ ಪದ್ಧತಿಯಿಂದ ಕೆಲ ವರ್ಗದವರನ್ನು ಹೊರತಂದು, ಶಿಕ್ಷಣದ ಅವಕಾಶ ಕಲ್ಪಿಸಿಕೊಟ್ಟು, ಕೆಲವೇ ದಿನಗಳಲ್ಲಿ ದೇವದಾಸಿ ಪದ್ಧತಿ ಮುಕ್ತ ಸಮಾಜ ನಿರ್ಮಾಣದಕನಸನ್ನು ಹೊತ್ತಿರುವುದೇ ಈ ಸಾಕ್ಷ್ಯಚಿತ್ರ ಎಂದು ಹೇಳಿದರು.
ಸಾಕ್ಷ್ಯಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ರವಿನಾರಾಯಣ, ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಬಿ., ಪ್ರಾಧ್ಯಾಪಕ ಪ್ರೊ.ಕೆ.ಜಿ. ಪರಶುರಾಮ, ಪತ್ರಿಕೋದ್ಯಮ ವಿಭಾಗದ ಸಂಯೋಜಕ ಡಾ.ಸಿಬಂತಿ ಪದ್ಮನಾಭ ಕೆ.ವಿ. ಉಪಸ್ಥಿತರಿದ್ದರು.
1930ರ ವರೆಗೂ ದೇವದಾಸಿ ಪದ್ಧತಿ ಎನ್ನುವುದು ದೈವಿಕ ಹಾಗೂ ಪವಿತ್ರ ಆಚರಣೆಯಾಗಿತ್ತು. ಹೆಣ್ಣನ್ನು ಲಕ್ಷ್ಮೀ ಎಂದು ಪೂಜಿಸುತ್ತಿದ್ದ ಕಾಲವದು. ಕಲೆಯ ಅನಾವರಣವೇ ದೇವದಾಸಿ ಪದ್ಧತಿ ಎಂಬುದಾಗಿತ್ತು. ಮೂಢನಂಬಿಕ, ಭಯ, ತಳ ಸಮುದಾಯದ ಆರ್ಥಿಕ ಪರಿಸ್ಥಿತಿಯ ಅಳಲನ್ನು ಕೀಳು ಮಟ್ಟದಲ್ಲಿ ಬಳಸಿಕೊಳ್ಳುವ ವರ್ಗದಿಂದಾಗಿ ಈ ಅನಿಷ್ಟ ಪದ್ಧತಿ ವೇಶ್ಯಾವಾಟಿಕೆಯಾಗಿ ಬದಲಾಗಿ ಇಂದಿಗೂ ಜೀವಂತವಾಗಿದೆ.