ಕನ್ನಡಪ್ರಭ ವಾರ್ತೆ, ತುಮಕೂರು
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮೊದಲ ಬಾರಿಗೆ ಆಗಮಿಸಿದ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್. ರಾಮಕೃಷ್ಣ, ಕಾಂಗ್ರೆಸ್ ಮುಖಂಡರಾದ ಕಲ್ಲಹಳ್ಳಿ ದೇವರಾಜು, ಗ್ರಾಮಾಂತರದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನರಸಿಂಹಮೂರ್ತಿ, ಕೈದಾಳ ರಮೇಶ್ ಅವರು ಬರಮಾಡಿಕೊಂಡು, ಪ್ರಾಥಮಿಕ ಸದಸ್ಯತ್ವದ ಅರ್ಜಿ ತುಂಬಿ, ಶುಲ್ಕ ಪಡೆದು, ಪ್ರಾಥಮಿಕ ಸದಸ್ಯತ್ವ ನೀಡಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೊರತೆಯಿಲ್ಲ. ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷವನ್ನು ಕಟ್ಟಿ,ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬರುವಂತೆ ಮಾಡುವುದು ನಮ್ಮ ಮುಂದಿರುವ ಗುರಿ, ಆ ಗುರಿಯನ್ನು ತಲುಪಲು ಪಕ್ಷದ ಹಿರಿಯ ಮುಖಂಡರಾದ ಡಾ.ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ ಹಾಗೂ ಇತರೆ ನಾಯಕರ ಸಲಹೆ ಪಡೆದು,ಪಕ್ಷವನ್ನು ಬಲಪಡಿಸಲಾಗುವುದು ಎಂದರು.ನನ್ನೊಂದಿಗೆ ಜೆಡಿಎಸ್ ಪಕ್ಷದ ಶೇ. 80 ರಷ್ಟು ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಏಕಾಎಕಿ ನಾವು ಹತ್ತಾರು ವರ್ಷಗಳಿಂದ ಯಾರ ವಿರುದ್ದ ಹೋರಾಟ ನಡೆಸುತ್ತಿದ್ದವೋ, ಅವರೊಂದಿಗೆ ರಾಜಕೀಯ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕಂಗಾಲಾಗಿದ್ದರು. ಅವರಿಗೆ ರಾಜಕೀಯ ನೆಲೆ ಕಲ್ಪಿಸುವುದರ ಜೊತೆಗೆ, ನನ್ನ ರಾಜಕೀಯ ಅಸ್ತಿತ್ವವನ್ನು ಅವಲೋಕಿಸಿ, ಕಾರ್ಯಕರ್ತರ ಸಲಹೆಯಂತೆ ಕಾಂಗ್ರೆಸ್ ಸೇರಿದ್ದೇನೆ. ಪಕ್ಷವನ್ನು ಸದೃಢಗೊಳಿಸಿ, ಲೋಕಸಭೆ ಹಾಗೂ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೇ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು, ಪಕ್ಷಕ್ಕೆ ಭದ್ರ ಬುನಾದಿ ಹಾಕಲಾಗುವುದು ಎಂದು ಗೌರಿಶಂಕರ್ ನುಡಿದರು.
ಮಾಜಿ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಪಾಲಿಕೆ ಸದಸ್ಯ ನಯಾಜ್ ಅಹಮದ್ ಮಾತನಾಡಿದರು. ಈ ವೇಳೆ ಪಾಲಿಕೆ ಸದಸ್ಯರಾದ ಕೆ. ಕುಮಾರ್, ಇನಾಯತ್, ಪಾಲನೇತ್ರಯ್ಯ, ವಿಜಯಕುಮಾರ್, ಸುಜಾತ, ನ್ಯಾತೇಗೌಡ ಮತ್ತಿತರರು ಉಪಸ್ಥಿತರಿದ್ದರು