ಕನ್ನಡಪ್ರಭ ವಾರ್ತೆ ತಾಂಬಾ
ಶಿಷ್ಯಂದಿರು ತಮಗೆ ಕಲಿಸಿದ ಗುರುವಿಗಿಂತ ಹೆಚ್ಚಿನ ಸಾಧನೆ ಮಾಡಿದರೆ ಅದೇ ಗುರುವಿಗೆ ನೀಡುವ ಮಹತ್ವದ ಗುರುಕಾಣಿಕೆ. ಹೆತ್ತ ತಾಯಿ ಹೊತ್ತ ನಾಡನ್ನು ಎಂದೂ ಮರೆಯಬಾರದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಧರ ನಡುಗಡ್ಡಿ ಹೇಳಿದರು.ಗ್ರಾಮದ ಶ್ರೀ ಸಂಗನಬಸವೇಶ್ವರ ಪ್ರೌಢ ಶಾಲೆಯ ೧೯೯೮-೯೯ನೇ ಬ್ಯಾಚಿನ ಹಳೇಯ ವಿದ್ಯಾರ್ಥಿಗಳಿಂದ ಪ್ರೊಜೆಕ್ಟರ್ ಕೊಡುಗೆ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಪಲಾಪೇಕ್ಷೆ ಇಲ್ಲದೇ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುವ ಗುರುಗಳಿಗಾಗಿ ಗುರುವಂದನೆ ಕಾರ್ಯಕ್ರಮ ಆಯೋಜಿಸಿರುವುದು ಹಾಗೂ ಪ್ರೊಜೆಕ್ಟರ್ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಎಂದರು.
ಶ್ರೀಶಾಂತೇಶ್ವರ ಬ್ಯಾಂಕಿನ ವ್ಯವಸ್ಥಾಪಕ ಬಸವರಾಜ ರೊಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಒಳ್ಳೆಯ ಪಾಠ ಕಲಿಸಿರುವುದರಿಂದ ದೇವರು ವರ್ಷದಿಂದ ವರ್ಷಕ್ಕೆ ಕಾಲೇಜಿನ ಏಳಿಗೆ ಮೂಲಕ ಆಶೀರ್ವದಿಸುತ್ತಿದ್ದಾನೆ. ಈ ಭಾಗದ ಬಡ ಮಕ್ಕಳಿಗೆ ಕಾಮಧೇನು ಕಲ್ಪವೃಕ್ಷವಾದ ಶ್ರೀ ಸಂಗನಬಸವೇಶ್ವರ ವಿದ್ಯಾ ಸಂಸ್ಥೆಯಿಂದ ಎಷ್ಟೋ ಮಕ್ಕಳೂ ತಮ್ಮ ಬಾಳನ್ನು ಉಜ್ವಲಗೊಳಿಸಿಕೊಂಡಿದ್ದಾರೆ ಎಂದರು.ನಿವೃತ್ತ ಶಿಕ್ಷಕ ಜೆ.ಆರ್.ಪೂಜಾರಿ ಮಾತನಾಡಿ, ಪರಿಣಾಮಕಾರಿಯಾದ ಕಲಿಕೆಗೆ ಆಧುನಿಕ ಕಲಿಕಾ ಉಪಕರಣಗಳು ಅವಶ್ಯ. ಅದನ್ನರಿತ್ತು ನಮ್ಮ ವಿದ್ಯಾರ್ಥಿಗಳು ಪ್ರೊಜೆಕ್ಟರ್ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ಶಿಕ್ಷಕಿ ಪಿ.ಬಿ.ಕಾಡಯ್ಯನಮಠ ಮಾತನಾಡಿ, ಶಿಷ್ಯರಾದವರು ಗುರುವನ್ನು ಮೀರಿಸಬೇಕು. ಅಂದಾಗ ಮಾತ್ರ ಗುರುವಿಗೆ ಸಂತೋಷವಾಗುವುದು. ಗುರುಗಳು ವಿದ್ಯಾದಾನ ಮಾಡುವುದರ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು. ಅಂದಾಗ ಮಾತ್ರ ಈ ಗುರುವಂದನೇ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಬರುವುದು ಎಂದರು.ನಿವೃತ್ತ ಶಿಕ್ಷಕ ಎಸ್.ಸಿ.ನಿಂಬಾಳ ಪ್ರೊಜೆಕ್ಟರ್ ಉದ್ಘಾಟಿಸಿದರು. ಸಂಸ್ಥೆಯ ಚೇರಮನ್ ಈರಣ್ಣ ಕಿಣಗಿ ಅಧ್ಯಕ್ಷತೆ ವಹಸಿದ್ದರು. ಪ್ರಾಚಾರ್ಯ ಸಿ.ಎಸ್.ಕಣಮೇಶ್ವರ, ಮಲಕಪ್ಪ ಸೋಮನಿಂಗ, ಪರಸು ಪಾಟೀಲ, ಬಾಬು ಕನೋಜಿ, ಆಯ್.ಸಿ.ಕಂಬಾರ, ರವಿ ಸಂಬಾಜಿ, ಮಹಾಂತೇಶ ಸೂರಪುರ, ಸುನಂದಾ ಮುಂಜಿ, ಗೀತಾ ಹಚ್ಚಡದ, ಲಕ್ಷ್ಮೀ ಪಡಗಣ್ಣವರ, ಶ್ರೀದೇವಿ ಗಂಗನಳ್ಳಿ, ಶ್ರೀದೇವಿ ನಸಲಿ, ನಾಗರಾಜ ಭರಮಣ್ಣ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಮುಖ್ಯಗುರು ಎಸ್.ಎಮ್.ಚವ್ಹಾಣ ಸ್ವಾಗತಿಸಿದರು. ಯುವರಾಜ ಪಡಗಣ್ಣವರ ನಿರೂಪಿಸಿದರು. ಜಿ.ಎಸ್.ಹಿರೇಮಠ ವಂದಿಸಿದರು.