ಕಳೆದ ಒಂದು ವರ್ಷದಿಂದ ತಾಲೂಕಿನ ಉಪನೋಂದಣಿ ಕಾರ್ಯಾಲಯದಲ್ಲಿ ನೋಂದಣಿ ಮಾಡಿದ ಸುಮಾರು ನೂರಕ್ಕಿಂತ ಹೆಚ್ಚು ಪ್ರಕರಣಗಳು ಇದುವರೆಗೂ ನಿಖಾಲಿಯಾಗದೆ ಉಳಿದಿವೆ.
ರಾಘು ಕಾಕರಮಠ
ಅಂಕೋಲಾ: ರಾಜ್ಯ ಸರ್ಕಾರ ಹೊಸದಾಗಿ ಬಿಡುಗಡೆಗೊಳಿಸಿರುವ ಕಾವೇರಿ ಅಂತರ್ಜಾಲ ತಾಣ ಇದುವರೆಗೂ ಸಫಲವಾಗದೆ ಇರುವುದು ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ತಾಲೂಕಿನ ಉಪನೋಂದಣಿ ಕಾರ್ಯಾಲಯದಲ್ಲಿ ನೋಂದಣಿ ಮಾಡಿದ ಸುಮಾರು ನೂರಕ್ಕಿಂತ ಹೆಚ್ಚು ಪ್ರಕರಣಗಳು ಇದುವರೆಗೂ ನಿಖಾಲಿಯಾಗದೆ ಉಳಿದಿವೆ. ಪಿತ್ರಾರ್ಜಿತ ಆಸ್ತಿಯನ್ನು ಭಾಗ ಮಾಡಿಕೊಂಡ ಜನರು, ಸರ್ಕಾರಕ್ಕೆ ಶುಲ್ಕವನ್ನೂ ಪಾವತಿಸಿ ಇತ್ತ ಜಮೀನಿನ ಖಾತೆ ಬದಲಾವಣೆಯೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದು, ಉಪನೋಂದಣಿ ಕಚೇರಿ, ತಹಸೀಲ್ದಾರ್ ಕಚೇರಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸುತ್ತಾಡುವ ದುಸ್ಥಿತಿ ಎದುರಾಗಿದೆ.ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಉಪನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡಲು ಕಾವೇರಿ ಎಂಬ ಜಾಲತಾಣ ಪರಿಚಯಿಸಿತ್ತು. ಪ್ರಾರಂಭದಲ್ಲಿ ಹೊಸ ಜಾಲತಾಣ ಹೊಂದಿಕೊಳ್ಳಲು ಕೊಂಚ ಸಮಯ ಹಿಡಿಯುತ್ತದೆ ಎಂದು ಸಾರ್ವಜನಿಕರು ಅಲ್ಪಸ್ವಲ್ಪ ತಪ್ಪು ತಡೆಗಳಾದರೂ ನಿಭಾಯಿಸಿಕೊಂಡು ಸಾಗುತ್ತಿದ್ದರು. ಅದರೆ 2 ವರ್ಷ ಕಳೆದರೂ ಜಾಲತಾಣ ಸಮರ್ಪಕ ಕಾರ್ಯ ನಿರ್ವಹಿಸದೆ ಇರುವುದು ಇಲಾಖೆಯಲ್ಲಿನ ಸಂಬಂಧಪಟ್ಟ ತಾಂತ್ರಿಕ ವಿಭಾಗದ ಬೇಜವಾಬ್ದಾರಿತನವನ್ನು ತೋರಿಸುವಂತಿದೆ.5 ವರ್ಷ ಕಳೆದರೂ ಆಗದ ಖಾತೆ ಬದಲಾವಣೆ: ಬೇಲೆಕೇರಿ ಗ್ರಾಮದ ಹಿಂದುಳಿದ ಹಾಲಕ್ಕಿ ಜನಾಂಗಕ್ಕೆ ಸೇರಿದ ತಾಕಿ ಸಿದ್ದಗೌಡ ಎಂಬ ಬಡ ಮಹಿಳೆ ತನ್ನ ಸಹೋದರರ ಜತೆ 2019ರಲ್ಲಿ ತಮ್ಮ ಈ ಸ್ವತ್ತು ಜಮೀನಿನ ವಿಭಾಗ ಮಾಡಿಕೊಂಡಿದ್ದು, ಇದುವರೆಗೂ ಖಾತೆ ಬದಲಾವಣೆ ಆಗಿಲ್ಲ. ಈ ಕುರಿತು ಬೇಲೆಕೇರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಗೌಡರಲ್ಲಿ ವಿಚಾರಿಸಿದಾಗ ಸಂಬಂಧಿಸಿದ ಯಾವುದೇ ದಾಖಲೆ ಉಪನೋಂದಣಿ ಕಚೇರಿಯ ಕಡೆಯಿಂದ ತಮ್ಮ ಬಳಿ ಬಂದಿಲ್ಲದಿರುವುದನ್ನು ಲಿಖಿತವಾಗಿ ದೃಢಪಡಿಸಿದ್ದಾರೆ.ಒಂದು ವರ್ಷದಿಂದ ಉಪನೋಂದಣಿ ಕಚೇರಿ, ಗ್ರಾಮ ಪಂಚಾಯಿತಿಗೆ ಅಲೆದಾಡಿ ರೋಸಿ ಹೋಗಿದರುವ ಅವರು ಮತ್ತೆ ಹೇಗಾದರೂ ಹಣ ಹೊಂದಿಸಿ ಕೊಡುತ್ತೇವೆ ನಮ್ಮ ಕೆಲಸ ಮಾಡಿಕೊಡಿ ಎಂದು ಅಸಹಾಯಕತೆ ಹೊರಹಾಕುತ್ತಿದ್ದಾರೆ.
ಒಂದು ವರ್ಷದ ಹಿಂದೆಯೇ ಈ ಕುರಿತು ಕಾವೇರಿ ತಂತ್ರಾಂಶ ವಿಭಾಗದ ಎಂಜಿನಿಯರ್ ರವಿ ಮಂಗನಕರ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ಸಂಬಂಧಪಟ್ಟಂತೆ ತಾಂತ್ರಿಕ ವಿಭಾಗಕ್ಕೆ ಸಮಸ್ಯೆ ಪರಿಹಾರಕ್ಕಾಗಿ ರವಾನೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಇಷ್ಟು ಪ್ರಯತ್ನಪಟ್ಟರೂ ಜಮೀನಿನ ಹಕ್ಕು ಬದಲಾವಣೆ ಆಗದೆ ಇರುವುದು ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಸಾರ್ವಜನಿಕರಿಗೆ ಸಮಸ್ಯೆ: ಕಾವೇರಿ ತಂತ್ರಾಂಶ ಪರಿಚಯಿಸಿದ ನಂತರ ಮಾಡಿದಂತ ಸಾಲದ ಭೋಜಾ ಖುಲಾಸೆ ಪ್ರಕರಣ ಸೇರಿದಂತೆ ಬಹುತೇಕ ಯಾವ ಪ್ರಕರಣಗಳು ಸಹ ಯಶಸ್ವಿಯಾಗಿಲ್ಲ. ಸಾಲ ಮರುಪಾವತಿಸಿ ಭೋಜಾ ಖುಲಾಸೆಗೊಳಿಸಿದರೂ ಜಮೀನು ಪತ್ರದ ಮೇಲೆ ಭೋಜಾ ಇರುವುದು ಕಾಣುತ್ತಿದೆ. ಇದರಿಂದಾಗಿ ಜಮೀನಿನ ಅಡಮಾನ ಇಟ್ಟು ವ್ಯವಹಾರ ನಡೆಸುವ ಬಡ ಕೂಲಿಕಾರರು ತಲೆಯ ಮೇಲೆ ಕೈ ಹೊತ್ತು ಕೂರುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಜಯವಂತ ನಾಯ್ಕ ಕೇಣಿ ತಿಳಿಸಿದರು.
ಸಮಸ್ಯೆ ನಿವಾರಣೆಗೆ ಯತ್ನ: ಸದ್ಯ ನಾನು ಇಲ್ಲಿನ ಉಪನೋಂದಣಿ ಕಚೇರಿಗೆ ಹೊಸದಾಗಿ ಬಂದಿದ್ದೇನೆ. ಆಗಿರುವ ಸಮಸ್ಯೆಯ ಕುರಿತು ಮಾಹಿತಿ ಪಡೆದು ಆದಷ್ಟು ಬೇಗ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸುತ್ತೇನೆ ಎಂದು ಅಂಕೋಲಾದ ಉಪನೊಂದನಾಧಿಕಾರಿ ರವಿ ಎಂ. ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.