ಮಳವಳ್ಳಿ: ಹಾಡಹಗಲೇ ಅಂಗಡಿ ಮಾಲೀಕನ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಗಿರೀಶ್(22), ಸುಭಾಸ್(21) ಹಾಗೂ ಮೈಸೂರಿನ ಕಿರಣ್(20) ಬಂಧಿತರು. ಆ.17ರಂದು ಕನಕಪುರದಲ್ಲಿ ಬೈಕ್ ವೊಂದನ್ನು ಕಳವು ಮಾಡಿದ್ದ ಆರೋಪಿಗಳು, ಮಧ್ಯಾಹ್ನ ಅಮೃತೇಶ್ವರನಹಳ್ಳಿ ಗ್ರಾಮದ ಅಂಗಡಿವೊಂದರಲ್ಲಿ ದಿನಸಿ ಸಾಮಗ್ರಿ ಖರೀದಿಸುವ ನೆಪದಲ್ಲಿ ಮಾಲೀಕ ಚಿಕ್ಕೀರೇಗೌಡರ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದರು. ನಂತರ ತಾಲೂಕಿನ ರಾವಣಿ ಗ್ರಾಮದ ಅಭಿಷೇಕ್ ಅವರ ಮನೆ ಮುಂದೆ ನಿಲ್ಲಿಸಿ ಬೈಕ್ ಅನ್ನು ಆರೋಪಿಗಳು ಕಳವು ಮಾಡಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆಗಾಗಿ ತಂಡವೊಂದನ್ನು ರಚಿಸಲಾಗಿತ್ತು. ಎರಡು ದಿನಗಳ ಹಿಂದೆ ಪಟ್ಟಣದಲ್ಲಿ ಗಸ್ತಿನಲ್ಲಿದ್ದ ಪೋಲೀಸರು ಅನಾಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಮೃತೇಶ್ವರನಹಳ್ಳಿ ಸರ ಕಳ್ಳತನ ಪ್ರಕರಣ ಹಾಗೂ ಬೈಕ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳವು ಮಾಡಿದ್ದ ಎರಡು ಬೈಕ್ ಗಳು ಹಾಗೂ 25 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.