ವಿಜಯಪುರ : ಈ ಹಿಂದೆ ಬಿಜೆಪಿಯಲ್ಲಿದ್ದಾಗ ‘ರಾಯಣ್ಣ ಬ್ರಿಗೇಡ್’ ರಚಿಸಿ ರಾಜಕೀಯ ಸಂಚಲನ ಉಂಟುಮಾಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ಇನ್ನೊಂದು ಬ್ರಿಗೇಡ್ ಘೋಷಣೆ ಮಾಡಿದ್ದಾರೆ. ಅದಕ್ಕೆ ‘ಕ್ರಾಂತಿವೀರ ಬ್ರಿಗೇಡ್’ ಎಂದು ನಾಮಕರಣ ಮಾಡಿದ್ದಾರೆ.
ಹಿಂದೂ ಧರ್ಮ ರಕ್ಷಣೆ, ದೇಶ ರಕ್ಷಣೆಗಾಗಿ ಈ ಸಂಘಟನೆ ಕೆಲಸ ಮಾಡಲಿದ್ದು, ರಾಜ್ಯಾದ್ಯಂತ ಈ ಕುರಿತು ಪ್ರವಾಸ ಮಾಡಿ ಫೆ.೪ರಂದು ಬ್ರಿಗೇಡ್‌ಗೆ ಚಾಲನೆ ನೀಡುವುದಾಗಿ ಕೆ.ಎಸ್.ಈಶ್ವರಪ್ಪ ಘೋಷಿಸಿದ್ದಾರೆ.
ವಿಜಯಪುರ ತಾಲೂಕಿನ ಸುಕ್ಷೇತ್ರ ಅರಕೇರಿಯಲ್ಲಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯ ಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಎಲ್ಲ ಸ್ವಾಮೀಜಿಗಳ ಪಾದ ಪೂಜೆ ಮಾಡುವ ಮೂಲಕ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.
ಮಕಣಾಪುರ ಶ್ರೀ ನೇತೃತ್ವ: ಮಕಣಾಪುರ ಸೋಮೇಶ್ವರ ಸ್ವಾಮೀಜಿ ಅವರನ್ನು ಕ್ರಾಂತಿವೀರ ಬ್ರಿಗೇಡ್ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದ್ದು, ಉತ್ತರ ಕರ್ನಾಟಕ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟದಡಿ ಕ್ರಾಂತಿವೀರ ಬ್ರಿಗೇಡ್ ರಚನೆ ಮಾಡಲಾಯಿತು. ಸ್ವಾಮೀಜಿಗಳ ನೇತೃತ್ವದಲ್ಲಿ ಮಾರ್ಗದರ್ಶಕ ಮಂಡಳಿ ಸಹ ರಚನೆ ಮಾಡಿ, ಪದಾಧಿಕಾರಿಗಳ ಹೆಸರನ್ನು ಸಹ ಘೋಷಣೆ ಮಾಡಲಾಗಿದೆ ಎಂದು ಈಶ್ವರಪ್ಪ ತಿಳಿಳಿಸಿದರು.
ಹಿಂದೂ ಧರ್ಮದ ರಕ್ಷಣೆಗಾಗಿ ಕ್ರಾಂತಿವೀರ ಬ್ರಿಗೇಡ್ ನಿಲ್ಲಲಿದ್ದು, ಮಠ ಮಂದಿರಗಳು ಆಸ್ತಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ಕುರಿತೂ ಈ ಬ್ರಿಗೇಡ್ ಹೋರಾಟ ಮಾಡಲಿದೆ ಎಂದ ಈಶ್ವರಪ್ಪ, ವಿಜಯಪುರದಲ್ಲಿ ನಡೆದ ಈ ಸಂಘಟನೆಯ ಮೂರನೇ ಸಭೆಯಲ್ಲಿ ಬ್ರಿಗೇಡ್ ಕಾರ್ಯಚಟುವಟಿಕೆ, ಧ್ಯೇಯೋದ್ದೇಶಗಳ ಬಗ್ಗೆ ಕೂಡ ಚರ್ಚಿಸಿದ್ದಾಗಿ ತಿಳಿಸಿದರು.
ಬಡವರಿಗೆ, ಹಿಂದುಳಿದವರಿಗೆ, ದೀನ ದಲಿತರಿಗೆ ಸಮಸ್ಯೆಯಾದಾಗ ಕೂತು ಚರ್ಚಿಸಿ ಬ್ರಿಗೇಡ್ ಮೂಲಕ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದೂ ಅವರು ಇದೇ ವೇಳೆ ವಿವರಿಸಿದರು. ಮಕಣಾಪುರ ಸೋಮೇಶ್ವರ ಸ್ವಾಮೀಜಿ, ಚಿಕ್ಕಗಲಗಲಿ ಮಠದ ಶ್ರೀ ಜನಾರ್ಧನ್ ಸ್ವಾಮೀಜಿ ಸೇರಿ ಹಲವು ಮಠಾಧೀಶರು ಇದ್ದರು.
ಪದಾಧಿಕಾರಿಗಳು:
ಅಧ್ಯಕ್ಷರು- ಸೊಮೇಶ್ವರ ಸ್ವಾಮೀಜಿ, ಮಖಣಾಪುರ, ಕಾರ್ಯದರ್ಶಿ-ಅಮರೇಶ್ವರ ಸ್ವಾಮೀಜಿ, ಕವಲಗುಡ್ಡ, ಖಜಾಂಚಿ-ಮಾಧುಲಿಂಗ ಮಹಾರಾಜರು, ಜಕನೂರ, ಪ್ರಭುದೇವ ಮಹಾಸ್ವಾಮಿಗಳು, ಹಳಿಂಗಳಿ, ಗೌರವಾಧ್ಯಕ್ಷರು-ನಿತ್ಯಾನಂದ ಸ್ವಾಮಿಗಳು, ರೂಗಿ, ಉಪಾಧ್ಯಕ್ಷರು- ಜನಾರ್ಧನ ಸ್ವಾಮಿಗಳು, ಗಲಗಲಿ, ಜಗದೀಶಾನಂದ ಸ್ವಾಮಿಗಳು, ವಾಮನಗಲ್ಲಿ, ಶಿವಕುಮಾರ ಸ್ವಾಮಿಗಳು, ಗದಗ, ಕವಿ ಸ್ವಾಮಿಗಳು, ಜಾಲಿಹಾಳ, ಶಿವಾನಂದ ಸ್ವಾಮೀಜಿ, ಲಖನಹಟ್ಟಿ, ಬೆಳವಣಸಿದ್ದ ಮಹಾಸ್ವಾಮಿಗಳು, ಗೋಕಾಕ