ಕನ್ನಡಪ್ರಭ ವಾರ್ತೆ ಸಾಗರ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದರೆ ಜನರೆ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದ್ದಾರೆ.ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯ್ತಿ ಅಧಿಕಾರದ ಕತ್ತು ಹಿಸುಕಿದ್ದಲ್ಲದೇ, ಗ್ರಾಮ ಪಂಚಾಯಿತಿ ಶಾಸನಬದ್ಧ ಅನುದಾನಕ್ಕೆ ಕೊಡಲಿ ಏಟು ಕೊಟ್ಟವರು ಈಶ್ವರಪ್ಪ. ರಾಜ್ಯಮಟ್ಟದಲ್ಲಿ ಸೋಲಾರ್ ಟೆಂಡರ್ ಕರೆದು ಪ್ರತಿ ಗ್ರಾಪಂನಿಂದ ₹೧.೨೫ ಲಕ್ಷ ವಸೂಲಿ ಮಾಡಿದ್ದಾರೆ. ರಾಜ್ಯದ ೬,೩೦೦ ಗ್ರಾಪಂನಿಂದ ತಲಾ ೫ ಲಕ್ಷ ರು.ನಂತೆ ಹಣ ವಸೂಲಿ ಮಾಡಲಾಗಿದೆ. ಈಗಾಗಲೇ ಅಳವಡಿಸಿದ್ದ ಸೋಲಾರ್ ಪೂರ್ಣ ಹಾಳಾಗಿದೆ. ಗ್ರಾಮ ಪಂಚಾಯ್ತಿಗೆ ಕಸ ವಿಲೇವಾರಿ ಆಟೋ ಟಿಪ್ಪರ್ ಕೂಡ ಅವರೇ ಸರಬರಾಜು ಮಾಡಿದ್ದಾರೆ. ಇದರಲ್ಲೂ ಭ್ರಷ್ಟಾಚಾರ ನಡೆದಿದ್ದು ಆಟೋ ಟಿಪ್ಪರ್‌ಗಳು ಕಳಪೆಯಿಂದ ಕೂಡಿದೆ. ನಾನು ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ಇದನ್ನು ವಿರೋಧಿಸಿದ್ದರಿಂದ ತಾಲೂಕಿನ ೨೦ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗೆ ಹಣ ಕೊಟ್ಟಿಲ್ಲ ಎಂದರು.
ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿರುವ ಈಶ್ವರಪ್ಪ ತಮ್ಮ ಮಗನಿಗೆ ಲೋಕಸಭಾ ಟಿಕೆಟ್ ಕೊಟ್ಟಿಲ್ಲ ಎಂದು ಬಂಡಾಯವಾಗಿ ನಿಲ್ಲಲು ಸಿದ್ಧರಾಗಿದ್ದಾರೆ. ಇಲ್ಲಿ ಸಿದ್ಧಾಂತಕ್ಕಿಂತ ತಮ್ಮ ಕುಟುಂಬಕ್ಕೆ ಟಿಕೆಟ್ ಕೊಟ್ಟಿಲ್ಲ ಎನ್ನುವುದೇ ಮುಖ್ಯವಾಗಿದೆ ಎಂದು ಟೀಕಿಸಿದರು.ಗೋಷ್ಠಿಯಲ್ಲಿ ಗಣಪತಿ ಹೆನಗೆರೆ, ಸ್ವಾಮಿಗೌಡ, ನಾಗರಾಜ ಮಜ್ಜಿಗೆರೆ ಹಾಜರಿದ್ದರು.
೨೫ ಸಾವಿರ ಮತವೂ ಪಡೆಯಲ್ಲಗ್ರಾಮ ಪಂಚಾಯ್ತಿಯಲ್ಲಿ ವಸೂಲಿ ಮಾಡುವ ಮನೆ ಕಂದಾಯ ೧೦ಪಟ್ಟು ಹೆಚ್ಚಿಸಿ ಜನರಿಗೆ ತೊಂದರೆ ಕೊಟ್ಟ ಹೆಗ್ಗಳಿಕೆ ಈಶ್ವರಪ್ಪರಿಗೆ ಸಲ್ಲುತ್ತದೆ. ಇಂತಹವರು ಲೋಕಸಭೆಗೆ ಹೋಗಿ ಇನ್ಯಾವ ಅಭಿವೃದ್ಧಿ ಮಾಡುತ್ತಾರೆ. ಯಡಿಯೂರಪ್ಪ ಬಿಟ್ಟು, ಬಿಜೆಪಿ ಬದಿಗಿಟ್ಟು ಕೆ.ಎಸ್.ಈಶ್ವರಪ್ಪ ೨೫ ಸಾವಿರ ಮತ ಪಡೆಯಲೂ ಸಾಧ್ಯವಿಲ್ಲ.
ಮಲ್ಲಿಕಾರ್ಜುನ ಹಕ್ರೆ, ತಾಪಂ ಮಾಜಿ ಅಧ್ಯಕ್ಷ