ಇಎಸ್‌ಐ ಆಸ್ಪತ್ರೆ ಕಟ್ಟಡ ಕಾಮಗಾರ ಶೀಘ್ರ ಆರಂಭಿಸಿ: ಈರಣ್ಣ ಕಡಾಡಿ

KannadaprabhaNewsNetwork |  
Published : Nov 14, 2024, 12:52 AM IST
ಬೆಳಗಾವಿ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ರಾಜ್ಯ ಕಾರ್ಮಿಕ ವಿಮಾ ನಿಗಮದ ಅಧಿಕಾರಿಗಳೊಂದಿಗೆ ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಸಭೆ ನಡೆಸಿದರು.  | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಬೆಳಗಾವಿ ನಗರದಲ್ಲಿ ಇಎಸ್‌ಐ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಶೀಘ್ರ ಪ್ರಾರಂಭಿಸುವಂತೆ ರಾಜ್ಯ ಕಾರ್ಮಿಕ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೇಂದ್ರ ಸರ್ಕಾರ ಬೆಳಗಾವಿ ನಗರದಲ್ಲಿ ಪ್ರಸ್ತುತ ಇರುವ ರಾಜ್ಯ ಕಾರ್ಮಿಕ ವಿಮಾ ನಿಗಮದ 50 ಹಾಸಿಗೆಗಳ ಆಸ್ಪತ್ರೆಯ ಹಳೆಯ ಕಟ್ಟಡ ತೆರವುಗೊಳಿಸಿ ಕೇಂದ್ರ ಕಾರ್ಮಿಕ ವಿಮಾ ನಿಗಮದ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸುಮಾರು ₹152.2 ಕೋಟಿ ಅನುದಾನದ ಟೆಂಡರ್ ಪ್ರಕ್ರಿಯೆ ಮುಗಿದು ಹಲವು ತಿಂಗಳು ಕಳೆದರೂ ಇದುವೆರೆಗೆ ಕಾಮಗಾರಿ ಪ್ರಾರಂಭಗೊಂಡಿಲ್ಲ. ಆದಷ್ಟು ಬೇಗ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪ್ರಾರಂಭಿಸುವಂತೆ ರಾಜ್ಯ ಕಾರ್ಮಿಕ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸೂಚಿಸಿದರು.

ಬುಧವಾರ ನಗರದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ರಾಜ್ಯ ಕಾರ್ಮಿಕ ವಿಮಾ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನಗರದ ಇಎಸ್‌ಐ ಆಸ್ಪತ್ರೆ ಕಟ್ಟಡ ಸ್ಥಳಾಂತರ ಮಾಡುವ ಕುರಿತು 2020ರ ಸೆಪ್ಟೆಂಬರ್‌ ನಲ್ಲಿ ಆಸಕ್ತಿ ವಹಿಸಿ, ಸಂಬಂಧಪಟ್ಟ ಸಚಿವರನ್ನು ಅಧಿಕಾರಿಗಳನ್ನು ಭೇಟಿಯಾಗಿ ನೂತನ ಆಸ್ಪತ್ರೆ ನಿರ್ಮಿಸುವ ಕುರಿತು ಪ್ರಯತ್ನ ಮಾಡಿದ್ದೆ. ಆದಷ್ಟು ಬೇಗ ಆಸ್ಪತ್ರೆಯ ಹಳೆಯ ಕಟ್ಟಡ ತೆರವುಗೊಳಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಯನ್ನು ಬೆಳಗಾವಿಯಲ್ಲಿರುವ ಕಾರಾವಿ ಚಿಕಿತ್ಸಾಲಯಗಳಿಗೆ ಹಾಗೂ ಹತ್ತಿರದ ಹುಬ್ಬಳ್ಳಿ ಮತ್ತು ದಾಂಡೇಲಿಯ ಆಸ್ಪತ್ರೆಗಳಿಗೆ ತಾತ್ಕಾಲಿಕ ನಿಯೋಜನೆ ಮಾಡಿ, ಕಟ್ಟಡ ತೆರವುಗೊಳಿಸಿಕೊಟ್ಟಲ್ಲಿ, ಕಟ್ಟಡ ತೆರವುಗೊಳಿಸುವ ಕಾಮಗಾರಿ ಹಾಗೂ ನಿರ್ಮಾಣ ಕಾಮಗಾರಿ ಶೀಘ್ರ ಮಾಡಬಹುದೆಂದು ಅಧಿಕಾರಿಗಳಿಗೆ ತಿಳಿಸಿದ ಅವರು, ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಶೀಘ್ರ ಕ್ರಮವಹಿಸಲು ಸೂಚಿಸಿದರು.

ವಿಒಟಿಸಿ ಹೊನಗಾ ಆಸ್ಪತ್ರೆ ಕಟ್ಟಡ ಮಾಲೀಕರು ಕಟ್ಟಡವನ್ನು ಇ.ಎಸ್.ಐ ಆಸ್ಪತ್ರೆಗೆ ಕೊಡಲು ಒಪ್ಪಿರುವ ಕಾರಣ, ಆ ಆಸ್ಪತ್ರೆಯನ್ನು ಸ್ಥಳಾಂತರಕ್ಕಾಗಿ ಪರಿಗಣಿಸುವಂತೆ ಸೂಚಿಸಿದರು. ಬೆಳಗಾವಿ ಕೇಂದ್ರಸ್ಥಾನವನ್ನಾಗಿ ಉಪ ಪ್ರಾದೇಶಿಕ ಕಚೇರಿ ಸ್ಥಾಪಿಸಿ ವಿಜಯಪುರ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಅದರ ವ್ಯಾಪ್ತಿಗೆ ತರಲು ಕ್ರಮ ವಹಿಸಬೇಕೆಂದು ಪ್ರಾದೇಶಿಕ ನಿರ್ದೇಶಕರಿಗೆ ಸೂಚಿಸಿದರು.

ಸಭೆಯಲ್ಲಿ ರಾಜ್ಯ ಕಾರ್ಮಿಕ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕ ಡಾ.ವಿ.ವರದರಾಜು, ಪ್ರಾಂತೀಯ ನಿರ್ದೇಶಕ ಹಾಗೂ ಹೆಚ್ಚುವರಿ ಆಯುಕ್ತ ರೇಣುಕಾ ಪ್ರಸಾದ ಟಿ., ಕಾರ್ಯನಿರ್ವಾಹಕ ಅಭಿಯಂತರ ವಿನೋದ ಖರ್ಕವಾಲ, ಉಪಪ್ರಾಂತೀಯ ಕಚೇರಿ ಉಪನಿರ್ದೇಶಕ ರಘುರಾಮನ್‌ ಕೆ., ಬೆಳಗಾವಿ ಇಎಸ್‌ಐ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಮಂಜುನಾಥ ಕಳಸನ್ನವರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌