ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗ ನಿವಾಸ ಮಾರಾಟ ಇದೀಗ ನಿರ್ಣಾಯಕ ಹಂತ ತಲುಪಿದ್ದು, ರಾಜ್ಯ ಸರ್ಕಾರದ ಖರೀದಿ ಪ್ರಕ್ರಿಯೆ ನಡೆಯುತ್ತಿರುವುದರ ನಡುವೆಯೇ ಎಸ್ಸೆನ್ ಪುತ್ರ ಕಿರಣ್ ಶಂಕರ್ ಖಾಸಗಿಯವರಿಗೆ ಮಾರಲು ಮುಂದಾಗಿರುವುದು ಅಚ್ಚರಿ ತರಿಸಿದೆ.
ಕಳೆದ ಏಳು ವರ್ಷಗಳಿಂದ ಮನೆ ಖರೀದಿ ಪ್ರಕ್ರಿಯೆಯ ಜಿಲ್ಲಾಡಳಿತ ನಡೆಸಿದ್ದು, ಅಂತಿಮಗೊಳಿಸಿಲ್ಲ. ಸರ್ಕಾರದ ಹೆಸರಿಗೆ ನೋಂದಣಿ ಮಾಡಿಸಿಕೊಡಲು ಎರಡು ಬಾರಿ ಅಮೇರಿಕಾದಿಂದ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಬಂದು ವಾಪಾಸ್ಸು ಹೋಗಿದ್ದಾರೆ. ವಿಲ್‌ನಲ್ಲಿ ನಮೂದಿಸಿರುವ ಕೆಲ ತಾಂತ್ರಿಕ ಕಾರಣಗಳು ನೋಂದಣಿಗೆ ಅಡ್ಡಿಯಾಗಿವೆ.ಮನೆ ಮೊಮ್ಮಗ ವಿನಯ್ ಗೆ ಸೇರಬೇಕೆಂದು ನಿಜಲಿಂಗಪ್ಪ ವಿಲ್ ಮಾಡಿದ್ದಾರೆ. ವಿಲ್ ಮಾಡುವಾಗ ತಮ್ಮ ಮೂವರು ಮಕ್ಕಳಾದ ಉಮಾಕಾಂತ್, ರಾಜಣ್ಣ, ಕಿರಣ್ ಶಂಕರ್ ಅನುಭವಿಸಿದ ನಂತರ ಮನೆ ವಿನಯ್ ಸೇರಬೇಕೆಂಬ ಅಂಶವ ವಿಲ್ ನಲ್ಲಿ ನಮೂದಿಸಿದ್ದರು. ಈ ಕಾರಣಕ್ಕಾಗಿಯೇ ಸಬ್ ರಿಜಿಸ್ಟ್ರಾರ್ ಮನೆಯನ್ನು ಸರ್ಕಾರದ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ನಿರಾಕರಿಸಿದ್ದರು. ಏತನ್ಮಧ್ಯೆ ನಿಜಲಿಂಗಪ್ಪ ಅವರ ನಿವಾಸವನ್ನು ಕಾಂಗ್ರೆಸ್ ಪಕ್ಷ ಖರೀದಿಸುತ್ತದೆ ಎಂದು ಸುದ್ದಿಗಳು ಹರಿದಾಡಿದ್ದವು. ಹಿಂದೊಮ್ಮೆ ಎಸ್ಸೆನ್ ಎಐಸಿಸಿ ಅಧ್ಯಕ್ಷರಾಗಿದ್ದರು. ಹಾಗಾಗಿ ಅವರ ನಿವಾಸವ ಕಾಂಗ್ರೆಸ್ ಖರೀದಿಸಿ ಪಕ್ಷದ ಹೆಸರಲ್ಲಿ ನಿರ್ಹಣೆ ಮಾಡುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸಾಲದೆಂಬಂತೆ ಸಚಿವೆ ಹೆಬ್ಬಾಳ್ಕರ್ ಎಸ್ಎನ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದರು. ನಂತರ ಖರೀದಿ ಪ್ರಕ್ರಿಯೆ ತಣ್ಣಗಾಗಿತ್ತು. ತಾಂತ್ರಿಕ ಕಾರಣದಿಂದಾಗಿ ಸರ್ಕಾರಕ್ಕೆ ನಿವಾಸ ಖರೀದಿ ಸಾಧ್ಯವಾದಿರುವಾಗ ಕಾಂಗ್ರೆಸ್ ಪಕ್ಷ ಹೇಗೆ ಖರೀದಿಸುತ್ತದೆ ಎಂಬ ಪ್ರಶ್ನೆಗಳು ಎದ್ದಿದ್ದವು.ಇದೀಗ ನಿಜಲಿಂಗಪ್ಪ ಅವರ ಪುತ್ರ ಖಾಸಗಿಯವರಿಗೆ ಮಾರಲು ಮುಂದಾಗಿದ್ದಾರೆ. ಎರಡು ತಿಂಗಳ ಹಿಂದೆ ಸ್ವತಹಃ ಸಿಎಂ ಸಿದ್ದರಾಮಯ್ಯ ಅವರು ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಕರೆಯಿಸಿ ಸರ್ಕಾರದಿಂದ ಮನೆ ಖರೀದಿ ಮಾಡುವ ವಿಷಯ ಪ್ರಸ್ತಾಪಿಸಿ ತಾಂತ್ರಿಕ ಅಡಚಣೆ ನಿವಾರಿಸುವ ಭರವಸೆ ನೀಡಿದ್ದರು. ಇಷ್ಟೆಲ್ಲ ಬೆಳವಣಿಗೆ ನಡುವೆ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಮನೆ ಮಾರಾಟ ಮಾಡಲು ಮುಂದಾಗಿರುವುದು ಸರ್ಕಾರಕ್ಕೆ ಸೆಡ್ಡು ಹೊಡೆದರಾ ಎಂಬ ಅನುಮಾನಗಳ ಮೂಡಿಸಿದೆ.