ಎಸ್ಸೆಸ್ಸೆಲ್ಸಿ: ‘ಸೂಪರ್‌ 60’ಗೆ ಶೇ.73.61ರಷ್ಟು ಫಲಿಂತಾಶ

KannadaprabhaNewsNetwork | Published : May 10, 2024 1:33 AM

ಸಾರಾಂಶ

ಶಾಸಕ ಪ್ರದೀಪ್‌ ಈಶ್ವರ್‌ ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಲ್ಲಿ 60 ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ಬೆಂಗಳೂರಿನಲ್ಲಿ ವಿಶೇಷ ಕೋಚಿಂಗ್ ಕೊಡಿಸಿದ್ದರು. ಅ‍ರೆಲ್ಲರೂ ಉತ್ತಮ ದರ್ಜೆಯಲ್ಲಿ ಪಾಸಾಗಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯು 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 18ನೇ ಸ್ಥಾನದಲ್ಲಿದ್ದು ಸರಾಸರಿ ಫಲಿತಾಂಶದಲ್ಲಿ 73.61ರ ಸಾಧನೆ ಮಾಡಿದೆ.ಶಾಸಕ ಪ್ರದೀಪ್ ಈಶ್ವರ್ ಸರಕಾರಿ ಶಾಲೆಯ ಮಕ್ಕಳ ಫಲಿತಾಂಶವನ್ನು ಉದ್ದೇಶದಲ್ಲಿ ಇಟ್ಟುಕೊಂಡು ಪ್ರಾರಂಭಿಸಿರುವ ಸೂಪರ್ 60 ಮೊದಲ ಪ್ರಯತ್ನದಲ್ಲಿಯೇ ಫಲ ನೀಡಿದೆ.

ಶಾಸಕ ಪ್ರದೀಪ್ ಈಶ್ವರ್ ಸೂಪರ್ 60 ಹೆಸರಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ವ್ಯವಸ್ಥೆ ಮಾಡಿದ್ದರು. ಇದರ ಪರಿಣಾಮ ಈಗ ಆ ವಿದ್ಯಾರ್ಥಿಗಳು ಇಂದು ಪ್ರಕಟವಾದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸುವುದರ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕೋಚಿಂಗ್‌

ಶಾಸಕರು ತಮ್ಮ ಕ್ಷೇತ್ರದ ಸರ್ಕಾರಿ ಶಾಲೆ ಹಾಗು ಅನುದಾನಿತ ಶಾಲೆಗಳಲ್ಲಿ ಓದುತ್ತಿದ್ದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಲ್ಲಿ ಅರವತ್ತು ಜನರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಬೆಂಗಳೂರಿನಲ್ಲಿ ವಿಶೇಷ ಕೋಚಿಂಗ್ ಕೊಡಿಸಿದ್ದರು. ಇಂದು ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅರವತ್ತು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.

ನಗರದ ಡಿಡಿಪಿಐ ಕಚೇರಿ ಆವರಣದಲ್ಲಿ ಪ್ರದೀಪ್ ಈಶ್ವರ್‌ ಅವರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದು, ಪ್ರದೀಪ್ ಈಶ್ವರ್ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಶುಭ ಹಾರೈಸಿದರು.

ಶಾಸಕರ ಸಂತಸ:

ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಈ ಬಾರಿ ಸರ್ಕಾರಿ ಶಾಲೆಗಳ ಫಲಿತಾಂಶ ಉತ್ತಮವಾಗಿದೆ. ವೆಬ್‌ಕ್ಯಾಮ್ ಮೂಲಕ ನಕಲು ಮಾಡಲು ಅವಕಾಶ ಇಲ್ಲದಂತೆ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿದ್ದರಿಂದ ಗುಣಮಟ್ಟದ ಫಲಿತಾಂಶ ಬರಲು ಸಾಧ್ಯವಾಗಿದೆ. ತಾವೂ ಉತ್ತಮ ಫಲಿತಾಂಶಕ್ಕೆ ಗಮನ ಹರಿಸಿದ್ದು ಸರ್ಕಾರಿ ಶಾಲೆಗಳ 60 ಬಡ ಮಕ್ಕಳನ್ನು ಆರಿಸಿಕೊಂಡು ಆ ಮಕ್ಕಳಿಗೆ ಪರಿಶ್ರಮ ಅಕಾಡೆಮಿ ಮೂಲಕ ತರಬೇತಿ ನೀಡಿದ ಪರಿಣಾಮ ಸೂಪರ್ 60 ಯಶಸ್ವಿಯಾಗಿದೆ ಎಂದು ಹೇಳಿದರು.

Share this article