ಕನ್ನಡಪ್ರಭ ವಾರ್ತೆ ಪಾಂಡವಪುರ
ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಹಾಗೂ ವೆಬ್ ಕ್ಯಾಮೆರಾ ಅಳವಡಿಸುವಂತೆ ಪರೀಕ್ಷಾ ಮಂಡಳಿ ನೀಡಿರುವ ಆದೇಶ ಅವೈಜ್ಞಾನಿಕವಾಗಿದೆ. ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಆಗ್ರಹಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾ.25ರಿಂದ ಎಸ್ಸೆಸ್ಸೆಲ್ಸಿ ಆರಂಭಗೊಳ್ಳುತ್ತಿದೆ. ಪರೀಕ್ಷೆ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ವೆಬ್ ಕ್ಯಾಮೆರಾಗಳನ್ನು ಅಳವಡಿಕೆ ಮಾಡಬೇಕು ಎಂಬ ಆದೇಶ ನೀಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಕ್ಕಳು ಪರೀಕ್ಷೆಗಳನ್ನು ನಿರ್ಭೀತಿ, ನೆಮ್ಮದಿ, ಪಾರದರ್ಶಕ ಹಾಗೂ ಪ್ರಶಾಂತ ವಾತಾವರಣದಲ್ಲಿ ಬರೆಯಬೇಕು. ಆದರೆ, ಪರೀಕ್ಷಾ ಮಂಡಳಿ ಆದೇಶದಿಂದ ಮಕ್ಕಳು ಭಯದ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪರೀಕ್ಷಾ ಮಂಡಳಿಯ ಆದೇಶದಿಂದ ಪೋಷಕರಲ್ಲೂ ಸಹ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಕಳೆದ ನೂರಾರು ವರ್ಷಗಳಿಂದಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಸಿಕೊಂಡು ಬರಲಾಗಿದೆ. ಆದರೆ, ಪರೀಕ್ಷಾ ಮಂಡಳಿ ಹೊಸ ಆದೇಶ ಎಲ್ಲರಲ್ಲು ಗೊಂದಲ ಸೃಷ್ಟಿಸಿದೆ ಎಂದರು.
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪಾಠ ಬೋಧನೆ ಮಾಡಿದ ಶಿಕ್ಷಕರನೇ ಪರೀಕ್ಷಾ ಕೇಂದ್ರಗಳ ಕೆಲಸಕ್ಕೆ ತೆಗುದುಕೊಳ್ಳದೆ ಬೇರೆಯನ್ನು ನೇಮಿಸುತ್ತಿದೆ. ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರಿಗೆ ಪರೀಕ್ಷೆ ನಡೆಸುವುದು ಗೊತ್ತಿಲ್ಲವೇ ಎಂದು ಹರಿಹಾಯ್ದರು.ಪರೀಕ್ಷಾ ಮಂಡಳಿ ಹಾಗೂ ಸರ್ಕಾರಗಳು ಯಾವುದಾದರು ಹೊಸ ತೀರ್ಮಾನ ತೆಗೆದುಕೊಳ್ಳಬೇಕಿದಿದ್ದರೆ ಪರೀಕ್ಷೆಗೆ ಇನ್ನೂ ಆರು ತಿಂಗಳು ಇರುವ ಮುಂಚೆಯೇ ಶಿಕ್ಷಣ ತಜ್ಞರು, ಸಂಘಟನೆಗಳ ಹಾಗೂ ಸಂಬಂಧಪಟ್ಟರ ಸಭೆ ಕರೆದು ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕೆ ಹೊರತು ಪರೀಕ್ಷೆ ಮೂರ್‍ನಾಲ್ಕು ದಿನ ಇರುವಂತಹ ಸಂದರ್ಭದಲ್ಲಿ ಸಭೆ ನಡೆಸಿ ಸಿಸಿ ಕ್ಯಾಮೆರಾ, ವೆಬ್ ಕ್ಯಾಮೆರಾ ಅಳವಡಿಕೆ ಮಾಡಬೇಕು ಎನ್ನುವುದು ಆದೇಶಿಸುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಶಂಕರಲಿಂಗೇಗೌಡ, ನಿವೃತ್ತ ಪ್ರಾಂಶುಪಾಲ ಡಿ.ಕೆ.ಶಿವರಾಂ, ಮೈಸೂರು ವಿಭಾಗದ ನೀಟ್ ಮತ್ತು ಮಾರ್ಗದರ್ಶಕರ ನವೀನ್‌ಕುಮಾರ್ ಹಾಜರಿದ್ದರು.ಸರ್ಕಾರಗಳು ಮಕ್ಕಳನ್ನು ಆತಂಕಕ್ಕೆ ದೂಡುವ ಕೆಲಸ ಮಾಡಬೇಡಿ. ಇದೀಗ ಹೊಸ ಹೊಸ ಆದೇಶ ಜಾರಿ ಮಾಡಿ ಮಕ್ಕಳನ್ನು ಗೊಂದಲಕ್ಕೆ ದೂಡಿ ಮಕ್ಕಳ ಬದುಕಿನ ಜತೆ ಚಲ್ಲಾಟ ಆಡಬೇಡಿ. ಕೂಡಲೇ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಮಧ್ಯೆ ಪ್ರವೇಶಿಸಿ ಆದೇಶ ವಾಪಸ್ ಪಡಯದಿದ್ದರೆ ದೊಡ್ಡಮಟ್ಟದ ಚಳವಳಿಯನ್ನು ರಾಜ್ಯಾದಂತ ರೂಪಿಸಬೇಕಾಗುತ್ತದೆ.-ಕೆ.ಟಿ.ಶ್ರೀಕಂಠೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ