ತರೀಕೆರೆ, ರಾಜ್ಯದಲ್ಲಿ ಪ್ರಸಕ್ತ ವರ್ಷ 75 ಹೊಸ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಿದ್ದು, ಬರುವ ವರ್ಷ 100 ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಇಂಧನ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜಿ.ಜಾರ್ಜ್ ಹೇಳಿದರು.
ತರೀಕೆರೆ : ರಾಜ್ಯದಲ್ಲಿ ಪ್ರಸಕ್ತ ವರ್ಷ 75 ಹೊಸ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಿದ್ದು, ಬರುವ ವರ್ಷ 100 ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುವುದು. ನಾಲ್ಕೂವರೆ ಲಕ್ಷ ಅನಧಿಕೃತ ಪಂಪ್ ಸೆಟ್ ಗಳ ಪೈಕಿ ಎರಡು ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ ಉಳಿದವನ್ನು ಮುಂದಿನ ವರ್ಷ ಸಕ್ರಮ ಗೊಳಿಸಲಾಗುವುದು ಎಂದು ಇಂಧನ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜಿ.ಜಾರ್ಜ್ ಹೇಳಿದರು.
ಶನಿವಾರ ತರೀಕೆರೆ ಮತ್ತು ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ನಿಂದ ಪಟ್ಟಣದಲ್ಲಿ ನಡೆದ ಸರ್ಕಾರದ ನಡೆ- ಕಾರ್ಯಕರ್ತರ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಈಗ ಹೆಚ್ಚಾಗಿದೆ. ಕೃಷಿಗೆ 18 ರಿಂದ 19 ಸಾವಿರ ಮೆಗಾ ವ್ಯಾಟ್ಸ್ ಯೂನಿಟ್ ವಿದ್ಯುತ್ ಅಗತ್ಯವಿದೆ. ಒತ್ತಡ ಹೆಚ್ಚಾಗುತ್ತಿರುವುದರಿಂದ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಿ ಅವುಗಳಿಗೆ ಸೋಲಾರ್ ಅಳವಡಿಸಲಾಗುವುದು. ಆಗ ನಿಮ್ಮ ವಿದ್ಯುತ್ತನ್ನು ನಿಮಗೆ ಸರಬರಾಜು ಮಾಡುವುದರಿಂದ ಭವಿಷ್ಯದಲ್ಲಿ ವಿದ್ಯುತ್ ಕೊರತೆ ಇರುವುದಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಇದು ಕಾರ್ಯಕರ್ತರ ಶ್ರಮದಿಂದ ಮಾತ್ರ ಸಾಧ್ಯ. ಕಾರ್ಯಕರ್ತರೆ ಪಕ್ಷದ ಆಧಾರಸ್ಥಂಭ ಎಂದ ಅವರು ಬರುವ ಗ್ರಾಪಂ, ತಾಪಂ, ಜಿಪಂ ಮತ್ತು ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಓಟಿ ಗಾಗಿ ಕೊಟ್ಟಿಲ್ಲ. ಜನರನ್ನು ಒಂದು ಮಾಡಲು ಪಾದಯಾತ್ರೆ ಮಾಡಿದ್ದೇವೆ. 20 ಅಂಶಗಳನ್ನು ಜಾರಿಗೆ ತಂದಿದ್ದೇವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು, ಗ್ಯಾರಂಟಿ ಯೋಜನಗಳಿಗೆ ₹60 ಸಾವಿರ ಕೋಟಿ ಆಯವ್ಯಯದಲ್ಲಿ ತೆಗೆದಿರಿಸಿದ್ದಾರೆ. ರಾಜ್ಯದಲ್ಲಿ ಒಳ್ಳೆಯ ಕೆಲಸ ಆಗುತ್ತಿದೆ ಎಂದು ಹೇಳಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ನಮ್ಮ ಪಕ್ಷ ಹೆಚ್ಚು ಸಂಘಟನೆಯಾಗಬೇಕು. ಶೀಘ್ರದಲ್ಲಿ ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣೆ ಇದ್ದು ಇದರಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು. ಯಾರಿಗೆ ಟಿಕೇಟ್ ನೀಡಿದರೂ ಪಕ್ಷದಡಿ ಅವರು ಗೆಲ್ಲಬೇಕು, ನಾವೆಲ್ಲರೂ ಅದಕ್ಕಾಗಿ ಶ್ರಮಿಸೋಣ. ಅಜ್ಜಂಪುರ ತಾಲೂಕು ಹಿಂದೆ ಕಾಣದ ಪ್ರಗತಿಯನ್ನು ನಾವು ಮಾಡಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ನುಡಿದಂತೆ ನಡೆಯುವವರು, ಅವರು ಅರ್ಥಿಕ ತಜ್ಞರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಘಟನಾ ಚತುರರು. ರಾಜ್ಯ ಹೆಚ್ಚು ಪ್ರಗತಿಯಾಗುತ್ತಿದೆ. ಹಾಗೆಯೇ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ ಕಾರ್ಯಕರ್ತರ ಅಭಿಪ್ರಾಯಗಳಿಗೆ ಪಕ್ಷ ಧ್ವನಿ ಯಾಗುತ್ತದೆ, ತಾಲೂಕಿನಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯ ಆಗಿವೆ ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದಸ್ವಾಮಿ, ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ , ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಅನಿಸಿಕೆ ಹಂಚಿಕೊಂಡರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂದೀಪ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ, ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಪಕ್ಷದ ಪದಾದಿಕಾರಿಗಳು, ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.