ಉಡುಪಿ ಜಿಲ್ಲಾ ಮಹಾತ್ಮಾಗಾಂಧಿ ಕ್ರೀಡಾಂಗಣಯಲ್ಲಿ 70ನೇ ಕನ್ನಡ ರಾಜ್ಯೋತ್ಸವಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರ ನೆರವಿಗೆ ಧಾವಿಸಲು ಅಕ್ಕಪಡೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಈ ಪಡೆಗಳಿಗೆ ನ.19ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುತ್ತದೆ. ಮುಂದೆ ಉಡುಪಿ, ಮೈಸೂರು, ಮಂಗಳೂರು ಮತ್ತು ಬೆಳಗಾವಿಯಲ್ಲಿಯೂ ಈ ಅಕ್ಕಪಡೆಗಳು ಜಾರಿಗೆ ಬರಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಅವರು ಶನಿವಾರ ಉಡುಪಿ ಜಿಲ್ಲಾ ಮಹಾತ್ಮಾಗಾಂಧಿ ಕ್ರೀಡಾಂಗಣಯಲ್ಲಿ 70ನೇ ಕನ್ನಡ ರಾಜ್ಯೋತ್ಸವದಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವರಕ್ಷೆ ಸ್ವೀಕರಿಸಿ, ಪಥಸಂಚಲನ ವೀಕ್ಷಿಸಿ ಸಂದೇಶ ನೀಡಿದರು.ಸರ್ಕಾರ ರಾಜ್ಯದಲ್ಲಿ 1.50 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದಿಂದ 8 ಸಾವಿರ ಕೋಟಿ ರು. ಹೂಡಿಕೆಯನ್ನು ಆಕರ್ಷಿಸುವ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಉಡುಪಿಯೂ ಸೇರಿದಂತೆ ಕರಾವಳಿಯ ಪ್ರವಾಸೋದ್ಯಮ ಆಕರ್ಷಣೆ ಹೆಚ್ಚಿಸಲು 200 ಕೋಟಿ ರು.ಗಳನ್ನು ನಿಗದಿಗೊಳಿಸಲಾಗಿದೆ ಎಂದವರು ಹೇಳಿದರು.2024-25ನೇ ಸಾಲಿನಿಂದಲೇ ನಾಲ್ಕು ಬಗೆಯ ವಿಕಲಚೇತನರ ಆರೈಕೆದಾರರಿಗೆ ಪ್ರತಿ ಮಾಹೆಗೆ 1000 ರು. ಆರೈಕೆದಾರರ ಭತ್ಯೆ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಇದು ದೇಶದಲ್ಲೇ ಪ್ರಥಮ ಎಂದರು.ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಅಧಿಕವಾಗಿದ್ದು, ಪ್ರಸಕ್ತ ಲಿಂಗಾನುಪಾತದಲ್ಲಿ 1000 ಪುರುಷರಿಗೆ 1004 ಮಹಿಳೆಯರಿದ್ದಾರೆ. ಇದು ಹೆಮ್ಮೆ ಪಡುವ ವಿಚಾರವಾಗಿದೆ. ಇಂದಿಗೂ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿರುವುದು ಜಿಲ್ಲೆಯ ಹೆಗ್ಗಳಿಕೆ. ಇದು ಜಗತ್ತಿನಲ್ಲೇ ಅತೀ ಅಪರೂಪದ ಸಂಗತಿಯಾಗಿದೆ ಎಂದು ಸಚಿವೆ ಹೇಳಿದರು.ನಂತರ ಸಚಿವೆ 77 ಸಾಧಕರು ಮತ್ತು ಸಂಘಟನೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಜಿಪಂ ಸಿಇಒ ಪ್ರತೀಕ್ ಬಾಯಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.----------ರಾಜ್ಯದಲ್ಲೀಗ ಮಹಿಳಾ ಸಬಲೀಕರಣ ಗ್ಯಾರಂಟಿ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದ್ದು, ರಾಜ್ಯದ ಶೇ.70- 95ರಷ್ಟು ಬಡ ಹಿಂದುಳಿದ ಮಹಿಳೆಯರ ಜೀವನಮಟ್ಟ ಸುಧಾರಣೆಯಾಗಿದೆ. ಶಕ್ತಿ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗಳ ಹಣದಿಂದ ಶೇ.88ರಷ್ಟು ಕುಟುಂಬಗಳು ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವಂತಾಗಿದೆ. ಶೇ.83ರಷ್ಟು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಗ್ಯಾರಂಟಿಗಳು ಸಹಕಾರಿಯಾಗಿದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.